18 ಕೋಟಿರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಆಡಳಿತಾತ್ಮಕ ಅನುಮೋದನೆ : ಸಚಿವ ಶಿವರಾಮ ಹೆಬ್ಬಾರ್

Spread the love

ಮುಂಡಗೋಡ : ನನ್ನ ಮತ ಕ್ಷೇತ್ರದ ಮುಂಡಗೋಡ ತಾಲೂಕಿನ ಬಾಚಣಕಿ, ಮಜ್ಜಿಗೇರಿ, ಇಂದೂರ, ಇಂದಿರಾನಗರ, ಕೊಪ್ಪ, ಆಶ್ರಯ ನಿವೇಶನ, ಜನತಾ ಕಾಲೋನಿ ಹಾಗೂ ಪುರ ಗ್ರಾಮದ ಜನವಸತಿ ಪ್ರದೇಶಗಳಲ್ಲಿ 18 ಕೋಟಿರೂ.ವೆಚ್ಚದಲ್ಲಿ ” ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ”  ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತಿರುವುದನ್ನು ತಿಳಿಸುವುದಕ್ಕೆ ಅತ್ಯಂತ ಸಂತಸವಾಗುತ್ತಿದೆ ಎಂದು ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ.

ಸುಮಾರು 12 ಸಾವಿರಕ್ಕೂ ಅಧಿಕ ಜನ ಸಂಖ್ಯೆಯನ್ನು ಹೊಂದಿರುವ ಈ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಮಹತ್ವಾಕಾಂಕ್ಷೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಅನೂಕುಲವಾಗಲಿದೆ. ಮುಂದಿನ 50 ವರ್ಷಗಳ ದೀರ್ಘಕಾಲಿಕ ದೂರದೃಷ್ಟಿ ಇರಿಸಿಕೊಂಡು ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ಸಿ.ಎಂ.ಗೆ ಅಭಿನಂದನೆ : ಗ್ರಾಮೀಣ ಪ್ರದೇಶದ ಪ್ರತಿ ಮನೆ – ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವ ನಮ್ಮ ಸಂಕಲ್ಪಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಮೂಲಕವಾಗಿ ಬಲ ನೀಡಿದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಈ ಭಾಗದ ಜನತೆಯ ಪರವಾಗಿ ಹೃದಯ ಸ್ಪರ್ಶಿ ಅಭಿನಂದನೆಗಳನ್ನು ಸಚಿವರಾದ ಶಿವರಾಮ ಹೆಬ್ಬಾರ ಅವರು ತಿಳಿಸಿದ್ದಾರೆ.