
ಗಾಂಧಿನಗರ, ಗುಜರಾತ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರು G20 ರಾಷ್ಟ್ರಗಳು ತಮ್ಮ ಆರೋಗ್ಯದ ಆವಿಷ್ಕಾರವನ್ನು ಸಾರ್ವಜನಿಕ ಒಳಿತಿಗಾಗಿ ಬಳಸಿಕೊಳ್ಳುವಂತೆ ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಗುರಿ ಸಾಧಿಸಲು ತಂತ್ರಜ್ಞಾನಕ್ಕೆ ಸಮಾನವಾದ ಪ್ರವೇಶವನ್ನು ಒದಗಿಸುವಂತೆ ಒತ್ತಾಯಿಸಿದ್ದಾರೆ.
ಅಷ್ಟೇ ಅಲ್ಲ ಆರೋಗ್ಯ ಉಪಕ್ರಮಗಳ ಯಶಸ್ಸಿಗೆ ಸಾರ್ವಜನಿಕ ಸಹಭಾಗಿತ್ವದ ಮಹತ್ವವನ್ನು ಪ್ರಧಾನಿ ನರೇಂದ್ರ ಮೋದಿ ಎತ್ತಿ ತೋರಿಸಿದ್ದಾರೆ. ಭಾರತದ ಕುಷ್ಠರೋಗ ನಿರ್ಮೂಲನಾ ಅಭಿಯಾನದ ಯಶಸ್ಸಿಗೆ ಇದು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಅವರು ಒತ್ತಿ ಹೇಳಿದರು.
ಗಾಂಧಿನಗರದಲ್ಲಿ ನಡೆದ ಜಿ20 ಆರೋಗ್ಯ ಸಚಿವರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು, ಆರೋಗ್ಯ ಉಪಕ್ರಮಗಳ ಯಶಸ್ಸಿನಲ್ಲಿ ಸಾರ್ವಜನಿಕ ಭಾಗವಹಿಸುವಿಕೆ ಪ್ರಮುಖ ಅಂಶವಾಗಿದೆ. ಇದು ನಮ್ಮ ಕುಷ್ಠರೋಗ ನಿರ್ಮೂಲನಾ ಅಭಿಯಾನದ ಯಶಸ್ಸಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ನಮ್ಮ ಮಹತ್ವಾಕಾಂಕ್ಷೆಯ ಟಿಬಿ ನಿರ್ಮೂಲನೆ ಕಾರ್ಯಕ್ರಮವು ಸಾರ್ವಜನಿಕ ಸಹಭಾಗಿತ್ವವನ್ನು ಉತ್ತೇಜಿಸುತ್ತದೆ. ನಾವು ದೇಶದ ಜನತೆಗೆ ಕ್ಷಯರೋಗ ನಿರ್ಮೂಲನೆಯಲ್ಲಿ ಕೈಜೋಡಿಸಿ ಅಂತಾ ಕರೆ ನೀಡಿದ್ದೇವೆ. ಇದರ ಅಡಿ ಸುಮಾರು 1 ಮಿಲಿಯನ್ ರೋಗಿಗಳನ್ನು ನಾಗರಿಕರು ದತ್ತು ಪಡೆದಿದ್ದಾರೆ. 2030 ರ ಜಾಗತಿಕ ಗುರಿಗಿಂತ ಮುಂಚಿತವಾಗಿ ಟಿಬಿ ನಿರ್ಮೂಲನೆಯನ್ನು ನಾವು ಸಾಧಿಸಲಿದ್ದೇವೆ ಎಂದು ಮೋದಿ ಹೇಳಿದರು.
ನಮ್ಮ ಎಲ್ಲ ನಿರ್ಧಾರಗಳಲ್ಲಿ ಆರೋಗ್ಯವು ಕೇಂದ್ರವಾಗಿರಬೇಕು ಎಂಬುದನ್ನು ಕೋವಿಡ್ ಸಾಂಕ್ರಾಮಿಕ ರೋಗವು ನಮಗೆ ತಿಳಿಸಿದೆ. ಮಹಾಮಾರಿ ನಮಗೆ ಸಹಕಾರದ ಮೌಲ್ಯವನ್ನು ಕಲಿಸಿದೆ. ಲಸಿಕೆ ಸ್ನೇಹ ಉಪಕ್ರಮದ ಅಡಿ ಭಾರತವು 300 ಮಿಲಿಯನ್ ಡೋಸ್ ಲಸಿಕೆಯನ್ನು ಗ್ಲೋಬಲ್ ಸೌತ್ ಸೇರಿದಂತೆ ನೂರಕ್ಕೂ ಹೆಚ್ಚು ದೇಶಗಳಿಗೆ ತಲುಪಿಸಿದೆ. ಮುಂದಿನ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ನಾವು ಸಂಪೂರ್ಣ ಸಿದ್ಧರಾಗಿರಬೇಕು ಎಂದು ಪ್ರಧಾನಿ ಕರೆ ನೀಡಿದರು.
ಸಮಗ್ರ ಮತ್ತು ಅಂತರ್ಗತ ಆರೋಗ್ಯ ರಕ್ಷಣೆಯ ವಿಧಾನದ ಅಡಿಯಲ್ಲಿ ಭಾರತವು ತನ್ನ ಆರೋಗ್ಯ ಮೂಲಸೌಕರ್ಯ ವಿಸ್ತರಿಸುತ್ತಿದೆ. ಗುಜರಾತ್‌ನ ಜಾಮ್‌ನಗರದಲ್ಲಿ ಡಬ್ಲ್ಯುಎಚ್‌ಒ ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ ಸ್ಥಾಪನೆಯು ಈ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ತೀವ್ರಗೊಳ್ಳಲಿವೆ. ಜಿ-20 ಹೆಲ್ತ್ ವರ್ಕಿಂಗ್ ಗ್ರೂಪ್ “ಒಂದು ಆರೋಗ್ಯ”ಕ್ಕೆ ಆದ್ಯತೆ ನೀಡಿದೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು.