ರಾಜ್ಯ ಸರ್ಕಾರ ಮಾಧ್ಯಮಗಳ ಸ್ವಾತಂತ್ರ್ಯ ಹರಣ ಮಾಡುತ್ತಿದೆ: ಬೊಮ್ಮಾಯಿ ವಾಗ್ದಾಳಿ

Spread the love

ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧ ಟೀಕಿಸಿದವರನ್ನು ದಮನ ಮಾಡುವ ಸರ್ವಾಧಿಕಾರಿ ಧೋರಣೆಯನ್ನು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿದೆ. ಸರ್ಕಾರದ ವಿರುದ್ಧ ಸುದ್ದಿ ಮಾಡಿದ್ದಕ್ಕಾಗಿ ಮಾಧ್ಯಮಗಳ ಸ್ವಾತಂತ್ರ್ಯ ಹರಣ ಮಾಡಲಾಗುತ್ತಿದ್ದು, ಇದರ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಿವಾಸದಲ್ಲಿ ನಡೆದ ಪಕ್ಷದ ಬೆಂಗಳೂರು ಶಾಸಕರ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಅನುದಾನ ಸೇರಿದಂತೆ ಇತ್ಯಾದಿ ವಿಚಾರದಲ್ಲಿ ಅಸಮಧಾನಗೊಂಡು ಬಿ.ಆರ್.ಪಾಟೀಲ್ ನೇತೃತ್ವದಲ್ಲಿ ಶಾಸಕರು ಮುಖ್ಯಮಂತ್ರಿಗಳಿಗೆ ಬರೆದಿದ್ದ ಪತ್ರ ಮಾಧ್ಯಮಗಳಲ್ಲಿ ವರದಿಯಾಯಿತು.

ಇದರ ಬೆನ್ನಲ್ಲೇ ಅಸಮಧಾನಿತ ಶಾಸಕರನ್ನು ಕರೆದು ಮಾತನಾಡುವ ಕೆಲಸ ಮುಖ್ಯಮಂತ್ರಿಗಳಿಂದ ಆಯಿತು. ನಂತರ ಹನ್ನೊಂದು ಜನ ಶಾಸಕರು ಪತ್ರ ನಾವು ಬರೆದಿಲ್ಲ, ಅದು ನಕಲಿ ಪತ್ರ ಎಂದು ದೂರು ಕೊಟ್ಟರು, ತಕ್ಷಣ ಮಾಧ್ಯಮದವರಿಗೆ ನೋಟಿಸ್ ಕೊಡಲಾಗುತ್ತಿದೆ. ಮೊದಲು ಪತ್ರಕ್ಕೆ ಸಹಿ ಮಾಡಿದವರನ್ನು ಕರೆಯಿಸಿ ವಿಚಾರಣೆ ಮಾಡಬೇಕಿತ್ತು. ಅವರು ಸಹಿ ಮಾಡಿದ್ದು ನಕಲಿಯಾ?, ನಿಜಾನಾ ಎನ್ನುವುದನ್ನು ವಿಚಾರಣೆ ಮಾಡಬೇಕು. ಶಾಸಕರು ಸಹಿ ಮಾಡಿರುವ ಬಗ್ಗೆ ಎಫ್ ಎಸ್ ಎಲ್ ಲ್ಯಾಬ್​ಗೆ ಕಳುಹಿಸಿ ತನಿಖೆ ನಡೆಸಲಿ, ಅದನ್ನು ಬಿಟ್ಟು ಸುದ್ದಿ ಪ್ರಸಾರ ಮಾಡಿದ ಮಾಧ್ಯಮಗಳನ್ನು ವಿಚಾರಣೆಗೆ ಕರೆಯುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಈ ರೀತಿ ಮಾಧ್ಯಮಗಳಿಗೆ ನೋಟಿಸ್‌ ಕೊಟ್ಟು ವಿಚಾರಣೆಗೆ ಕರೆದಿರುವುದು ಜಗತ್ತಿನಲ್ಲಿ ಎಲ್ಲಿಯೂ ನಡೆದಿರಲಿಲ್ಲ” ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಗುತ್ತಿಗೆದಾರರು ತಮ್ಮ ಕಾಮಗಾರಿಗಳ ಬಾಕಿ ಬಿಲ್ ಪಾವತಿ ಆಗಿಲ್ಲ ಎಂದು ರಾಜ್ಯಪಾಲರಿಗೆ ದೂರು ನೀಡಿದರೆ ಅವರ ವಿರದ್ಧವೂ ಕೇಸ್ ದಾಖಲಿಸಲಾಗುತ್ತಿದೆ. ನಮ್ಮ ಅವಧಿಯಲ್ಲಿಯೂ ಗುತ್ತಿಗೆದಾರರು ಆರೋಪ ಮಾಡಿದ್ದರು, ನಾವು ಇದೇ ರೀತಿ ನಡೆದುಕೊಂಡಿದ್ದೇವಾ?, ರಾಜ್ಯಪಾಲರಿಗೂ ಗೌರವ‌ ಇಲ್ಲವೇ ?, ಗುತ್ತಿಗೆದಾರರಿಗೆ ಒಂದು ಸಂಘ ಇದೆ. ಅವರು ಕೆಲಸ ಮಾಡಿದ್ದು, ರಾಜ್ಯಪಾಲರು ಮತ್ತು ಪ್ರತಿಪಕ್ಷದ ನಾಯಕರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದ್ದಾರೆ. ನಿಮ್ಮ ವಿರುದ್ಧ ಧ್ವನಿ ಎತ್ತಿದರೆ ಅವರ ವಿರುದ್ದ ಕೇಸ್ ಹಾಕುತ್ತೀರಿ, ನಿಮ್ಮ ವಿರುದ್ದ ಯಾರೂ ಧ್ವನಿ ಎತ್ತಬಾರದು ಅನ್ನುವ ಧೋರಣೆ ತಾಳುತ್ತಿದ್ದೀರಿ, ಅದನ್ನು ನಾವು ಖಂಡಿಸುತ್ತೇವೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.