ಯಲ್ಲಾಪುರದಲ್ಲಿ ಅಂತರ ಜಿಲ್ಲಾ ಕಳ್ಳರ ಬಂಧನ : 2 ಲಕ್ಷರೂ. ಮೌಲ್ಯದ ಚಿನ್ನಾಭರಣ ವಶ

Spread the love

ಯಲ್ಲಾಪುರ : ಅಪ್ರಾಪ್ತ ಬಾಲಕ ಸೇರಿ ಅಂತರ ಜಿಲ್ಲಾ ಕಳ್ಳರಿಬ್ಬರನ್ನು ಬಂಧಿಸಿರುವ ಪೊಲೀಸರು ಬಂಧಿತರಿಂದ ಸುಮಾರು 2 ಲಕ್ಷ 20 ಸಾವಿರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡ ಘಟನೆ ಯಲ್ಲಾಪುರದಲ್ಲಿ ಇಂದು ನಡೆದಿದೆ.

  ಧಾರವಾಡ ಜಿಲ್ಲೆಯ ಲಕ್ಷ್ಮೀಸಿಂಗನಕೇರಿ ಮೂಲದ ಹುಲಗಪ್ಪ ಹುಲಗೇಶ ಬಂಡಿವಡ್ಡರ (32) ಹಾಗೂ ಇನ್ನೊಬ್ಬ ಅಪ್ರಾಪ್ತನ ಬಂಧನ ಮಾಡಲಾಗಿದ್ದು, ಇನ್ನೊಬ್ಬ ಆರೋಪಿಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  2020 ರ ಡಿಸೆಂಬರ್ ನಲ್ಲಿ ಯಲ್ಲಾಪುರದ ಶಾರದಾ ನಗರದ ಮನೆಯೊಂದರ ಬೀಗ ಮುರಿದು ಕಳ್ಳತನ ಮಾಡಿದ್ದ ಆರೋಪಿಗಳು ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಯಲ್ಲಾಪುರ, ಭಟ್ಕಳ, ಸಿದ್ದಾಪುರ ಹಾಗೂ ಶಿವಮೊಗ್ಗ ಜಿಲ್ಲೆಯ ಸೊರಬ, ಆನವಟ್ಟಿ, ಧಾರವಾಡ ಜಿಲ್ಲೆಯ ಕಲಘಟಗಿ, ಹುಬ್ಬಳ್ಳಿ ಕಡೆಗಳಲ್ಲಿ ಮನೆ, ಬ್ಯಾಂಕ್ ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

  ಬಂಧಿತರಿಂದ ವಶಪಡಿಸಿಕೊಂಡ ಬಂಗಾರದ 42 ಗ್ರಾಂ.ನ ಒಂದು ನೆಕ್ಲೇಸ್, ಎರಡು ಉಂಗುರ, ಎರಡು ಕಿವಿಯ ಓಲೆ ಸೇರಿದಂತೆ 100 ಗ್ರಾಂ. ಬೆಳ್ಳಿಯ ಆಭರಣದ ಒಟ್ಟು ಮೌಲ್ಯ 2 ಲಕ್ಷ 20 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.

  ಯಲ್ಲಾಪುರದ ಸಿಪಿಐ ಸುರೇಶ ಯಳ್ಳೂರ ನೇತೃತ್ವದಲ್ಲಿ ಪಿಎಸ್ ಐಗಳಾದ ಮಂಜುನಾಥ ಗೌಡರ, ಮುಜಾಹಿದ್ ಅಹ್ಮದ್ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸಿದ್ದಾರೆ.