![](https://rajnewsline.com/wp-content/uploads/2021/07/boatmissing2-1024x437.jpg)
ಹೊನ್ನಾವರ : ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ನಾಡದೋಣಿಯೊಂದು ಮುಳುಗಡೆಯಾಗಿ ದೋಣಿಯಲ್ಲಿದ್ದ ಮೂರು ಜನ ಮೀನುಗಾರರ ರಕ್ಷಣೆ ಮಾಡಿದ್ದು,ಓರ್ವ ಮೀನುಗಾರ ನಾಪತ್ತೆಯಾದ ಘಟನೆ ಹೊನ್ನಾವರ ತಾಲೂಕಿನ ಕಾಸರಕೋಡು ಭಾಗದಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಉದಯ್ ದಾಮೋದರ್ ತಾಂಡೇಲ್ (30) ಕಾಣೆಯಾದ ಮೀನುಗಾರನಾಗಿದ್ದಾನೆ. ವಿಜಯ್ ಕ್ರಿಸ್ತಾದಾಸ್ ಫರ್ನಾಂಡಿಸ್ (49),ಶಂಕರ್ ಮಾದೇವ ತಾಂಡೇಲ್ ( 38), ಕಾಮೇಶ್ವರ್ ದೇವಯ್ಯ ತಾಂಡೇಲ್ (39) ರಕ್ಷಣೆಗೊಳಗಾದವರಾಗಿದ್ದಾರೆ.
ಇಂದು ಬೆಳಿಗ್ಗೆ ಸಮುದ್ರ ಮೀನುಗಾರಿಕೆಗೆ ಹೊನ್ನಾವರದ ಕಾಸರಕೋಡ ಭಾಗದಿಂದ ತೆರಳಿದ್ದ ದೋಣಿ ಹೊನ್ನಾವರದ ಇಕೋ ಬೀಚ್ ಬಳಿ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಡೆಯಾಗಿದೆ.ಈ ವೇಳೆ ಮೂರು ಜನ ಈಜಿ ದಡದ ಭಾಗಕ್ಕೆ ಬಂದಿದ್ದು, ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳ,ಪೊಲೀಸ್ ಸಿಬ್ಬಂದಿ ಹಾಜರಾಗಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.ನಾಪತ್ತೆಯಾದ ಮೀನುಗಾರನ ಹುಡುಕಾಟ ನಡೆಸಲಾಗುತ್ತಿದೆ. ಘಟನೆ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.