
ಬೆಂಗಳೂರು: ಡಿಸೆಂಬರ್ನಲ್ಲಿ ನಡೆಯುವ ಅಧಿವೇಶನ ಮುಗಿದ ನಂತರ 31 ಜಿಲ್ಲೆಯಲ್ಲಿ ‘ರೈತ ಸಾಂತ್ವನ ಯಾತ್ರೆಗೆ’ ಚಾಲನೆ ನೀಡಲಾಗುವುದು ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿಯಲ್ಲಿ ಇಂದು ನಡೆದ ಬರ ಅಧ್ಯಯನ ತಂಡಗಳ ರಚನೆ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಅಧಿವೇಶನ ಮುಗಿದ ನಂತರ ಬಸ್ ವ್ಯವಸ್ಥೆ ಮಾಡಿ 20 ರಿಂದ 25 ಮಂದಿ ನಾಯಕರ ಜೊತೆ 31 ಜಿಲ್ಲೆಗಳಲ್ಲೂ ರೈತ ಸಾಂತ್ವನ ಯಾತ್ರೆ ಮಾಡಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ರೈತ ಕುಟುಂಬ ಆತ್ಮ ಸ್ಥೈರ್ಯ ಕಳೆದುಕೊಳ್ಳಬಾರದು ಎಂದು ನಾಡಿನ ಜನತೆಗೆ ಮನವಿ ಮಾಡಿದ ಅವರು, ಜನರ ಪರ, ರೈತರ ಪರವಾಗಿ ಜೆಡಿಎಸ್ ಇದೆ. ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಯಾತ್ರೆ ರೂಪಿಸಲಾಗಿದೆ ಎಂದರು. ಈ ಸರ್ಕಾರ ಜನಪರ ಸರ್ಕಾರ ಅಲ್ಲ. ಇದೊಂದು ಲೂಟಿ ಸರ್ಕಾರವೆಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ.
ಈ ಸರ್ಕಾರದ ಪಾಪದ ಕೊಡ ತುಂಬಿದೆ ಎಂದ ಹೆಚ್ ಡಿಕೆ, ಯಾಕೆ ಕುಮಾರಸ್ವಾಮಿ ಮೇಲೆ ವಾಗ್ದಾಳಿ ಮಾಡ್ತಾರೆ ಅಂತ ಅವರನ್ನೆ ಕೇಳಬೇಕು. ಜೋಡೆತ್ತು ಎಷ್ಟು ದಿನ ಇರುತ್ತದೆಂದು ನೋಡೋಣ. ಎತ್ತು ಏರಿಗೆ ಏರಿಗೆಳೆದರೆ, ಕೋಣ ನೀರಿಗೆ ಎಳೆದಂತೆ ಎಂಬ ಗಾದೆ ಮಾತಿನಂತೆ ನಾಯಕರಿಬ್ಬರು ಉತ್ತರ ದಿಕ್ಕಿಗೆ ಒಬ್ಬರು, ದಕ್ಷಿಣ ದಿಕ್ಕಿಗೆ ಒಬ್ಬರು ಇದ್ದರಲ್ಲವೇ?. ನೋಡೋಣ ಎಷ್ಟು ದಿನ ಇರುತ್ತಾರೆ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಜೆಡಿಎಸ್ನಿಂದ ರಾಜ್ಯದಲ್ಲಿ ಬರ ಪರಿಸ್ಥಿತಿ ಅಧ್ಯಯನ: ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಜೆಡಿಎಸ್ನಿಂದ ತಂಡ ರಚನೆ ಮಾಡಲಾಗಿದೆ. ರಾಜ್ಯದಲ್ಲಿನ ಬರ ಪರಿಸ್ಥಿತಿ ಅಧ್ಯಯನ ಮಾಡಿ ಸಂಕಷ್ಟದಲ್ಲಿರುವ ರೈತರನ್ನು ಭೇಟಿ ಮಾಡಿ ಧೈರ್ಯ ತುಂಬಲು ಹಾಗೂ ರಾಜ್ಯ ಸರ್ಕಾರಕ್ಕೆ ಬರ ಪರಿಹಾರ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸೂಕ್ತ ಸಲಹೆ ನೀಡಲು ಪಕ್ಷದ ವತಿಯಿಂದ ಪಕ್ಷದ ಮುಖಂಡರನ್ನು ಒಳಗೊಂಡ ಬರ ಅಧ್ಯಯನ ತಂಡಗಳನ್ನು ರಚಿಸಲಾಗಿದೆ. 30 ಜಿಲ್ಲೆಗಳಿಗೆ 30 ತಂಡಗಳನ್ನು ರಚನೆ ಮಾಡಿದ್ದೇವೆ. ಹತ್ತು ದಿನಗಳಲ್ಲಿ ಎಲ್ಲೆಡೆ ಪ್ರವಾಸ ಮಾಡಿ ವರದಿ ಕೊಡುತ್ತೇವೆ. ಸರ್ಕಾರಕ್ಕೆ 15 ದಿನಗಳು ಗಡುವು ಕೊಡುತ್ತಿದ್ದೇವೆ. ರೈತರಿಗೆ ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೆಚ್ಡಿಕೆ ಆಗ್ರಹಿಸಿದರು.