ಕೋಲಾರ: ಜಿಲ್ಲೆಯ ಮಾಲೂರಿನ ಯಲುವಳ್ಳಿಯಲ್ಲಿರುವಂತ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರಿಂದಲೇ ಶೌಚದ ಗುಂಡಿ ಸ್ವಚ್ಛಗೊಳಿಸಿದಂತ ಘಟನೆ ನಡೆದಿತ್ತು. ಇದರ ತನಿಖೆಯ ಬೆನ್ನಲ್ಲೇ, ರಾಜ್ಯದ ಮತ್ತೊಂದು ಶಾಲೆಯಲ್ಲಿ ವಿದ್ಯಾರ್ಥಿನಿಯರ ಬೆತ್ತಲೆ ವೀಡಿಯೋ ಚಿತ್ರೀಕರಣ ಘಟನೆ ಪತ್ತೆಯಾಗಿದೆ.
ಈ ವಸತಿ ಶಾಲೆಯಲ್ಲಿ ಬಾಲಕಿಯರ ಕೊಠಡಿಯಲ್ಲಿ ರಹಸ್ಯ ವೀಡಿಯೋವನ್ನು ಚಿತ್ರೀಕರಿಸಿರೋ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಸ್ವತಹ ಈ ವಿಷಯವನ್ನು ವಿದ್ಯಾರ್ಥಿಗಳೇ ಮಾಧ್ಯಮಗಳ ಜೊತೆಗೆ ಹಂಚಿಕೊಂಡಿದ್ದು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ಅವರು ನಿನ್ನೆ ವಸತಿ ಶಾಲೆಗೆ ಭೇಟಿ ನೀಡಿದ್ದಾಗ ನಮ್ಮ ವಸತಿ ಶಾಲೆಯಲ್ಲಿ ಕೊಠಡಿಯಲ್ಲಿ ವಿದ್ಯಾರ್ಥಿನಿಯರು ಬಟ್ಟೆ ಬದಲಿಸೋ ವೀಡಿಯೋವನ್ನು ಚಿತ್ರೀಕರಿಸಿರೋ ಆಘಾತಕಾರಿ ವೀಡಿಯೋವನ್ನು ತೋರಿಸಿದ್ದಾರೆ. ಇದರಿಂದ ಬೆಚ್ಚಿ ಬೀಳುವಂತೆ ಆಗಿದೆ ಎಂದಿದ್ದಾರೆ.
ವಿದ್ಯಾರ್ಥಿನಿಯರ ಕೊಠಡಿಯಲ್ಲಿ ಇಬ್ಬರ ವೀಡಿಯೋವನ್ನು ಚಿತ್ರೀಕರಿಸಲಾಗಿದೆ. ಈ ವಸತಿ ಶಾಲೆಯಲ್ಲಿ ಬಾಲಕರು ಮಾತ್ರವಲ್ಲದೇ, ಬಾಲಕಿಯರಿಗೂ ಟಾರ್ಚರ್ ಕೊಡಲಾಗುತ್ತಿದೆ ಎಂಬುದಾಗಿ ವಿದ್ಯಾರ್ಥಿನಿಯರು, ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಈ ಘಟನೆಯ ಸಂಬಂಧ ಸೂಕ್ತ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದಾಗಿ ವಿದ್ಯಾರ್ಥಿನಿಯರ ಪೋಷಕರು ಆಗ್ರಹಿಸಿದ್ದಾರೆ.