ಶೂನ್ಯ ದಾಖಲಾತಿ ಹೊಂದಿರುವ ಸರ್ಕಾರಿ ಪಿಯು ಕಾಲೇಜುಗಳ ಉಪನ್ಯಾಸಕ ಹುದ್ದೆಗಳ ಸ್ಥಳಾಂತರ : ರಾಜ್ಯ ಸರ್ಕಾರ ಆದೇಶ

Spread the love

ಬೆಂಗಳೂರು : ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೂನ್ಯ ದಾಖಲಾತಿ ಹೊಂದಿರುವ ವಿವಿಧ ವಿಷಯಗಳ ಉಪನ್ಯಾಸಕರ ಹುದ್ದೆಗಳನ್ನು ಅವಶ್ಯಕವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಸ್ಥಳಾಂತರಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೂನ್ಯ ದಾಖಲಾತಿ ಹೊಂದಿರುವ ವಿವಿಧ ವಿಷಯಗಳ ಉಪನ್ಯಾಸಕರ ಹುದ್ದೆಗಳಿದ್ದು ಸದರಿ ಹುದ್ದೆಗಳ ಎದುರಾಗಿ ಯಾವುದೇ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿರುವುದಿಲ್ಲ, ರಾಜ್ಯದ ಕೆಲವು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಹೊಸದಾಗಿ ಮಂಜೂರಾಗಿರುವ ಭಾಷೆ, ವಿಷಯ ಮತ್ತು ಸಂಯೋಜನೆಗಳಿಗೆ ಯಾವುದೇ ರೀತಿಯ ಹುದ್ದೆಗಳನ್ನು ಮಂಜೂರು ಮಾಡಿರುವುದಿಲ್ಲ. ಕೆಲವೊಂದು ಕಾಲೇಜುಗಳಲ್ಲಿ ಗಣನೀಯವಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಅಂತಹ ಕಾಲೇಜುಗಳಿಗೆ ಹುದ್ದೆಗಳನ್ನು ಮಂಜೂರು ಮಾಡುವುದು / ಸ್ಥಳಾಂತರ ಮಾಡುವುದು ಅತ್ಯವಶ್ಯಕವಾಗಿರುತ್ತದೆ.
ಉಲ್ಲೇಖಿತ ಸರ್ಕಾರದ ಪತ್ರದಲ್ಲಿ ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೂನ್ಯ ದಾಖಲಾತಿ ಹೊಂದಿರುವ ಸದರಿ ಹುದ್ದೆಗಳ ಎದುರಾಗಿ ಯಾವುದೇ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿಲ್ಲವಾದ ಕಾರಣ ಅಂತಹ 261 ಉಪನ್ಯಾಸಕ ಹುದ್ದೆಗಳನ್ನು ದಾಖಲಾತಿ ಹೆಚ್ಚಾಗಿರುವ ಮತ್ತು ಹುದ್ದೆ ಮಂಜೂರಾತಿ ಆಗದೇ ಇರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಸ್ಥಳಾಂತರಿಸಲು ಅನುಮತಿ ನೀಡಲಾಗಿರುತ್ತದೆ.
ಸರ್ಕಾರದ ಆದೇಶದ ಮೇರೆಗೆ ಈ ಜ್ಞಾಪನದೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಅಂತಹ ಉಪನ್ಯಾಸಕ ಹುದ್ದೆಗಳನ್ನು ದಾಖಲಾತಿ ಹೆಚ್ಚಾಗಿರುವ ಮತ್ತು ಹುದ್ದೆ ಮಂಜೂರಾತಿ ಆಗದೇ ಇರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಸ್ಥಳಾಂತರಿಸಿ ಆದೇಶಿಸಿದೆ. ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರುಗಳು ಹುದ್ದೆಗಳ ವಿವರಗಳನ್ನು ಹುದ್ದೆ ಮಂಜೂರಾತಿ ವಹಿಯಲ್ಲಿ ಸೂಕ್ತ ನಮೂದುಗಳನ್ನು ಮಾಡಲು ಸೂಚಿಸಿದೆ. ಈಗ ಸ್ಥಳಾಂತರಿಸಲಾದ ಉಪನ್ಯಾಸಕ ಹುದ್ದೆಗಳ ಎದುರಾಗಿ ಕಾರ್ಯಭಾರ ಕಡಿಮೆ ಇರುವ ಉಪನ್ಯಾಸಕರನ್ನು ನಿಯೋಜಿಸಲು ಸಂಬಂಧಪಟ್ಟ ಜಿಲ್ಲಾ ಉಪ ನಿರ್ದೇಶಕರುಗಳು ಅಗತ್ಯ ಕ್ರಮವಹಿಸಲು ಸೂಚಿಸಿದೆ.