
ಶಿರಸಿ: ಗುಡ್ಡ ಕುಸಿದು ಕಳೆದ 35 ಗಂಟೆಗಳಿಂದ ಶಿರಸಿ- ಕುಮಟಾ ಸಂಪರ್ಕ ಕಡಿತಗೊಳಿಸಿದ್ದ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಬುಧವಾರ ಸಂಜೆ ವೇಳೆಗೆ ತೆರವಾಗುವ ಸಾಧ್ಯತೆ ಇದೆ.

ಕಳೆದ 24 ಗಂಟೆಗಳಿಂದ ನಿರಂತರವಾಗಿ ಮಳೆ ಮಧ್ಯೆ ಜೆಸಿಸಿ, ಹಿಟಾಚಿ ಬಳಸಿ ತೆರವು ಮಾಡಲಾಗುತ್ತಿದೆ. ಆದರೆ ಎಷ್ಟು ಮಣ್ಣು ತೆಗೆದರೂ ಧರೆಯ ಮೇಲಿನ ಗಿಡಮರಗಳು ಜಾರಿ ಬರುತ್ತಿರುವುದರಿಂದ ನಿರೀಕ್ಷೆಯಂತೆ ತೆರವಿಗೆ ಸಾಧ್ಯವಾಗಿರಲಿಲ್ಲ. ಮಂಗಳವಾರ ಮಣ್ಣು, ಮರ ಗಿಡಗಳ ತೆರವು ನಡೆದಿತ್ತು. ಬುಧವಾರ ಬೆಳಗ್ಗಿನಿಂದಲೇ ಮತ್ತೆ ಕೆಲಸ ಆರಂಭವಾಗಿದ್ದು, ಸಂಜೆ ಆರೇಳು ಗಂಟೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಬುಧವಾರ ಮಳೆ ಬಾರದೇ ಹೋದರೆ ಮಣ್ಣು ಜರಿಯುವದು ನಿಲ್ಲಬಹುದು. ಮಳೆ ಆಧರಿಸಿ ಸಾಧ್ಯತೆ ಗೊತ್ತಾಗಲಿದೆ ಎಂದು ಹೇಳಲಾಗಿದೆ.
ಈ ಮಧ್ಯೆ ಕೊರೆದ ಧರೆಯ ನಡುವೆ ಒರತೆ ನೀರೂ ಬರುತ್ತಿದ್ದು, ಇದೂ ಗುಡ್ಡವನ್ನು ಜಾರಿಸಲು ಕಾರಣ ಎನ್ನಲಾಗಿದೆ.
ಬದಲಿ ಮಾರ್ಗ : ಶಿರಸಿ ನಿಲೇಕಣಿ ಬಳಿ ಹಾಗೂ ದಿವಗಿ ಬಳಿ ಬದಲಿ ಮಾರ್ಗ ಸೂಚಿಸಲಾಗಿದೆ. ಶಿರಸಿಯಿಂದ ಕರಾವಳಿಗೆ ಯಲ್ಲಾಪುರ, ಅಂಕೋಲಾ, ಶಿರಸಿ, ಯಾಣ ಮಾರ್ಗ ಅಥವಾ ಸಿದ್ದಾಪುರ ಬಡಾಳ ಘಟ್ಟದಲ್ಲಿ ಸಂಚಾರಕ್ಕೆ ಸೂಚಿಸಲಾಗಿದೆ.
