
ಅಂಕೋಲಾ: `ಭೂ ಕುಸಿತ ವಲಯದ ಗಂಗಾವಳಿ ನದಿಯಲ್ಲಿ ನೀರಿನ ಹರಿವು ಜೋರಾಗಿರುವುದರಿಂದ ಯಾರು ಬಂದರೂ ಆಳದಲ್ಲಿ ಶೋಧ ಸಾಧ್ಯವಾಗುತ್ತಿಲ್ಲ. ಹೀಗಾಗಿ ತಾತ್ಕಾಲಿಕವಾಗಿ ಕೆಲಸ ನಿಲ್ಲಿಸಲಿದ್ದು, ನದಿ ಹರಿವು ಕಡಿಮೆ ಆದ ನಂತರ ಮತ್ತೆ ಕಾರ್ಯಾಚರಣೆ ನಡೆಸಲಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ತಿಳಿಸಿದರು.

ರವಿವಾರ ಸಂಜೆ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಈಗಾಗಲೇ 8 ಶವ ಸಿಕ್ಕಿದೆ. ಇನ್ನು ಎಷ್ಟು ಶವ ಇದೆ ಎಂದು ಗೊತ್ತಿಲ್ಲ. ಮೂವರು ನಾಪತ್ತೆ ಆದ ಬಗ್ಗೆ ದೂರಿದ್ದು, ನಿಯಮಗಳ ಪ್ರಕಾರ 7 ವರ್ಷಗಳವರೆಗೆ ಅವರಿಗೆ ಪರಿಹಾರ ವಿತರಿಸಲು ಅಸಾಧ್ಯ. ಅದಾಗಿಯೂ ಅವರ ಕುಟುಂಬದವರ ಜೊತೆ ಅಗ್ರಿಮೆಂಟ್ ಮಾಡಿಕೊಂಡು ಮಾನವೀಯ ನೆಲೆಯಲ್ಲಿ ಪರಿಹಾರ ವಿತರಿಸಲಾಗುತ್ತದೆ’ ಎಂದು ತಿಳಿಸಿದರು.
ಮಣ್ಣಿನ ಅಡಿ ಲಾರಿ ಇತ್ತು ಎಂದು ಭಾವಿಸಿ ಅಲ್ಲಿ ಶೋಧ ನಡೆಸಲಾಯಿತು. ನೀರಿನ ಆಳದಲ್ಲಿ ಹುಡುಕಲಾಯಿತು. ಆದರೆ, ಅದು ಪತ್ತೆಯಾಗಿಲ್ಲ. ನೀರಿನಲ್ಲಿ ಮಣ್ಣು, ಕಲ್ಲು, ಮರ-ಗಿಡ ಎಲ್ಲವೂ ಇದೆ. ಹಾಗೆಂದ ಮಾತ್ರಕ್ಕೆ ಕಾರ್ಯಾಚರಣೆ ಎಂದಿಗೂ ನಿಲ್ಲಿಸುವುದಿಲ್ಲ. ಆದರೆ, ನೀರಿನಲ್ಲಿ ಇಳಿಯಲು ಸಾಧ್ಯವಿಲ್ಲ’ ಎಂದರು.

ಕೇಂದ್ರ ಹೆದ್ದಾರಿ ಸಚಿವರು ಎಲ್ಲಿ? : ರಾಜ್ಯದ ಮುಖ್ಯಮಂತ್ರಿ, ಕಂದಾಯ ಸಚಿವರು ಇಲ್ಲಿ ಬಂದಿದ್ದಾರೆ. ಆದರೆ, ಇಷ್ಟು ದೊಡ್ಡ ದುರಂತ ನಡೆದರೂ ಕೇಂದ್ರ ಸಚಿವರು ಬಂದಿಲ್ಲ. ಅವರು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕಿತ್ತು. ಭಟ್ಕಳದಿಂದ ಕಾರವಾರದವರೆಗೆ ಸಮಸ್ಯೆಗಳಿದ್ದು, ಅದರ ಬಗ್ಗೆ ಹೇಳಿದರೂ ಐ ಆರ್ ಬಿ ಕಂಪನಿ ಗಂಭೀರವಾಗಿ ಪರಿಗಣಿಸಿಲ್ಲ' ಎಂದು ದೂರಿದರು.
ಇದೀಗ ಹೊನ್ನಾವರ ಕಾಸರಗೋಡಿನಲ್ಲಿ ಹೆದ್ದಾರಿ ಮೇಲೆ ಮಣ್ಣು ಬಿದ್ದಿದೆ’ ಎಂದರು.