ಮಳೆಯಿಂದ ಅಡ್ಡಿಯಾದ ಶಿರೂರು ಕಾರ್ಯಾಚರಣೆ

Spread the love

ಕಾರವಾರ : ಶಿರೂರು ಗುಡ್ಡ ಕುಸಿತದ ಕಾರಣ ಗಂಗಾವಳಿ ನದಿ ಪಾಲಾದವರ ಹುಡುಕಾಟಕ್ಕೆ ಆಗಮಿಸಿದ್ದ ಮುಳುಗು ತಜ್ಞ ಈಶ್ವರ ಮಲ್ಪೆ ಅವರಿಗೆ ಭಾನುವಾರ ನಿರಾಸೆಯಾಗಿದೆ. 

ಸಾಕಷ್ಟು ಪ್ರಯತ್ನ ನಡೆಸಿದರೂ ಅವರಿಂದ ನೀರಿನ
ಆಳದಲ್ಲಿ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿಲ್ಲ.
ಅಮವಾಸ್ಯೆಯ ದಿನ ಗಂಗಾವಳಿ ನದಿ ಶಾಂತವಾಗಬಹುದು ಎಂದು ಅವರು ನಿರೀಕ್ಷಿಸಿದ್ದರು. ಹೀಗಾಗಿ ಅಮವಾಸ್ಯೆ ದಿನವಾದ ರವಿವಾರ ಬೆಳಗ್ಗೆಯೇ ಕಾರ್ಯಾಚರಣೆಗೆ ಶುರು ಮಾಡಿದ್ದರು. ಆದರೆ, ಘಟ್ಟದ ಮೇಲಿನ ಪ್ರದೇಶದಲ್ಲಿ ಅತ್ಯಧಿಕ ಮಳೆಯಾದ ಕಾರಣ ನೀರಿನ ಒತ್ತಡ ಹೆಚ್ಚಾಗಿದ್ದು, ನದಿ ಶಾಂತವಾಗಿರಲಿಲ್ಲ. ಹೀಗಾಗಿ `ಅಪಾಯದ ಪರಿಸ್ಥಿತಿಯಲ್ಲಿ ಶೋಧ ನಡೆಸುವುದು ಬೇಡ’ ಎಂದು ಅಧಿಕಾರಿಗಳು ಸೂಚಿಸಿದರು.
ಈಗಾಗಲೇ 4-5 ಬಾರಿ ರಕ್ಷಣಾ ಕಾರ್ಯಾಚರಣೆಗೆ
ಆಗಮಿಸಿದ ಈಶ್ವರ ಮಲ್ಪೆ ಸಂತ್ರಸ್ತರ ಕುಟುಂಬಕ್ಕೆ ಮಾತುಕೊಟ್ಟಿದ್ದು, ಅದನ್ನು ಈಡೇರಿಸುವುದಕ್ಕಾಗಿ ಮತ್ತೆ
ಬಂದಿದ್ದಾರೆ. ಮಳೆ ಕಡಿಮೆ ಆದ ನಂತರ ಇನ್ನೊಮ್ಮೆ ಬಂದು ಖಂಡಿತವಾಗಿ ಕಾರ್ಯಾಚರಣೆ ನಡೆಸುವುದಾಗಿ ಅವರು ಹೇಳಿದ್ದಾರೆ.
ಜುಲೈ 16 ರಂದು ಅಂಕೋಲಾ ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಭೂ ಕುಸಿತವಾಗಿದ್ದು, 8 ಜನರ ಶವ ಸಿಕ್ಕಿದೆ. ಇನ್ನೂ ಮೂವರ ಬಗ್ಗೆ ಯಾವುದೇ ಸುಳಿವಿಲ್ಲ. ಅವರು ನದಿ ಆಳದಲ್ಲಿ ಶವವಾಗಿರಬಹುದು ಎಂದು ಊಹಿಸಲಾಗಿದ್ದು, ಶೋಧಕ್ಕಾಗಿ ಹಲವು ರೀತಿಯ ಪ್ರಯತ್ನ ನಡೆದಿದೆ. ಈವರೆಗೆ ನೀರಿನ ಆಳದಲ್ಲಿ ಕಲ್ಲು, ಮಣ್ಣು ಹಾಗೂ ಮರಗಳು ಮಾತ್ರ ಕಾಣಿಸಿವೆ.