
ಕಾರವಾರ : ಗಿಡಗಳ ಆರೈಕೆ ಮೂಲಕ ಪ್ರಸಿದ್ದಿ ಪಡೆದು,
ಇದೇ ಕಾರಣಕ್ಕೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಅಂಕೋಲಾ ತಾಲ್ಲೂಕು ಹೊನ್ನಳ್ಳಿಯ ತುಳಸಿ ಗೌಡ (86) ಸೋಮವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.

ಕೆಲ ತಿಂಗಳುಗಳಿಂದ ಅವರು ವಯೋ ಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮೃತರಿಗೆ ಓರ್ವ ಪುತ್ರ, ಪುತ್ರಿ ಇದ್ದಾರೆ.
ಜೀವನಾಧಾರಕ್ಕೆ ಅರಣ್ಯ ಇಲಾಖೆಯ ನರ್ಸರಿಯಲ್ಲಿ ದಿನಗೂಲಿ ಆಧಾರದಲ್ಲಿ ಕೆಲಸಕ್ಕೆ ಸೇರಿದ್ದ ತುಳಸಿ ಗಿಡಗಳ ಆರೈಕೆಗೆ ಜೀವನ ಮುಡಿಪಿಟ್ಟಿದ್ದರು. ನಿವೃತ್ತಿ ಬಳಿಕವೂ ಸಸಿಗಳನ್ನು ನೆಡುವ, ಪೋಷಿಸುವ ಕೆಲಸ ಮಾಡಿದ್ದರು. ಈವರೆಗೆ ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಅವರು ಬೆಳೆಸಿದ್ದಾರೆ. 1999ರಲ್ಲಿ ‘ರಾಜ್ಯೋತ್ಸವ’ ಪ್ರಶಸ್ತಿ, ‘ಇಂದಿರಾ ಪ್ರಿಯದರ್ಶಿನಿ’ ಪ್ರಶಸ್ತಿ ನೀಡಲಾಗಿತ್ತು. 2020ರಲ್ಲಿ ಕೇಂದ್ರ ಸರ್ಕಾರ ‘ಪದ್ಮಶ್ರೀ ಪ್ರಶಸ್ತಿ ಘೋಷಿಸಿತ್ತು. 2022ರಲ್ಲಿ ಅದನ್ನು ಪ್ರದಾನ ಮಾಡಲಾಗಿತ್ತು.
