ದಾಂಡೇಲಿ ಹೆದ್ದಾರಿಯಲ್ಲಿ ಆನೆ ಹಿಂಡಿನ ಓಡಾಟ – ರಸ್ತೆಗಿಳಿದು ಸೆಲ್ಫಿಗೆ ಮುಂದಾದ ಪ್ರವಾಸಿಗರು..!

Spread the love

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಳಿಯಾಳ-ದಾಂಡೇಲಿ ರಾಜ್ಯ ಹೆದ್ದಾರಿಯಲ್ಲಿ ಆನೆಗಳ ಗುಂಪು ಪ್ರತ್ಯಕ್ಷವಾಗಿದೆ. ಹೆದ್ದಾರಿಯ ಸುತ್ತಮುತ್ತ ಓಡಾಡುತ್ತಿದ್ದು, ಆತಂಕ ಸೃಷ್ಟಿಸಿದೆ. 

ಹೆದ್ದಾರಿಯಲ್ಲಿ ಆನೆಗಳನ್ನ ಕಂಡು ಕೆಲಹೊತ್ತು ವಾಹನ ನಿಲ್ಲಿಸಿದ ಸವಾರರು ಆನೆಗಳೊಂದಿಗೆ ಸೆಲ್ಫಿ ಹಾಗೂ ವೀಡಿಯೋ ತೆಗೆದು ಹುಚ್ಚಾಟವಾಡಿದ್ದಾರೆ. ಸದ್ಯ ದಾಂಡೇಲಿಯ ಅರಣ್ಯ ಭಾಗದಲ್ಲಿ ಆನೆಗಳ ಹಿಂಡು ಸಂಚರಿಸುತ್ತಿದ್ದು, ಈ ಭಾಗದ ತೋಟ, ಕಬ್ಬಿನ ಗದ್ದೆಗಳಿಗೆ ನುಗ್ಗುತ್ತಿದೆ. 

ಜೋಯಿಡಾ ಭಾಗದಲ್ಲಿ ಸಹ ಆನೆಗಳು ಓಡಾಡುತ್ತಿದ್ದು, ಆಗಾಗ ತೋಟಗಳಿಗೆ ನುಗ್ಗುತ್ತಿವೆ. ಯಲ್ಲಾಪುರ, ಶಿರಸಿ, ಸಿದ್ದಾಪುರ, ಮುಂಡಗೋಡು ಭಾಗದಲ್ಲಿ ಸಹ ಆನೆಗಳು ನವೆಂಬರ್‌ನಿಂದ ಡಿಸೆಂಬರ್ ವೇಳೆಯಲ್ಲಿ ಓಡಾಡುತ್ತಿವೆ. ಆಹಾರ ಅರಸಿ ಕಾಡು ಬಿಟ್ಟು ನಾಡಿನತ್ತ ಮುಖ ಮಾಡಿ, ರೈತರ ಫಸಲಿಗೆ ಲಗ್ಗೆ ಇಡುತ್ತಿವೆ.

ಆನೆ ಕಾರಿಡಾರ್‌ಗೆ ಒತ್ತುವರಿ ಸಂಕಷ್ಟ
ಪ್ರತಿ ವರ್ಷ ಆನೆಗಳು ಹಳಿಯಾಳ ದಾಂಡೇಲಿ, ಯಲ್ಲಾಪುರ ಭಾಗದಿಂದ ಮುಂಡಗೋಡು ಭಾಗದ ಮೂಲಕ ಸಂಚಾರ ಮಾಡುತ್ತವೆ. ಯಲ್ಲಾಪುರ, ಮುಂಡಗೋಡ ಭಾಗದಲ್ಲಿ ನೀರು ಆಶ್ರಯಿಸಿ ಕೆಲವು ದಿನ ಕಳೆಯುತ್ತವೆ. ಆದರೆ, ಅರಣ್ಯ ಒತ್ತುವರಿ, ರಸ್ತೆ ಅಭಿವೃದ್ಧಿಯಿಂದಾಗಿ ಆನೆಗಳು ಸಂಚರಿಸುವ ಮಾರ್ಗದ ಬಂದ್ ಆಗುತ್ತಿದ್ದು, ಜನ ಬೇಲಿ ಹಾಕಿ ಉಳುಮೆ ಮಾಡುತ್ತಿದ್ದಾರೆ. ಇದರಿಂದಾಗಿ ಆನೆಗಳು ಮಾರ್ಗ ಬದಲಿಸುತ್ತಿದ್ದು, ಇದೀಗ ಆನೆಗಳು ಬಾರದ ಪ್ರದೇಶಗಳಲ್ಲಿ ಸಹ ಆನೆಗಳ ಹಿಂಡು ಬರತೊಡಗಿದೆ.