
ಬೆಳಗಾವಿ: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಅವರು ಇಲ್ಲಿನ ಹಿಂಡಲಗಾ ಕಾರಾಗೃಹದಿಂದ ಜಾಮೀನಿನ ಮೇಲೆ ಬಿಡುಗಡೆಯಾದರು.
ಅವರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ರಾಖಿ ಕಟ್ಟಿ, ಹಣೆಗೆ ತಿಲಕವಿಟ್ಟು ಬರಮಾಡಿಕೊಂಡರು. ಬೆಂಬಲಿಗರು ಹೂಮಾಲೆಗಳನ್ನು ಹಾಕಿ ಸ್ವಾಗತಿಸಿಕೊಂಡರು. ಆವರಣದಲ್ಲಿ ಅಭಿಮಾನಿಗಳು ಮತ್ತು ಬೆಂಬಲಿಗರ ಜಯಘೋಷಗಳು ಮುಗಿಲು ಮುಟ್ಟಿವೆ.
ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಸಿಬಿಐ ಬಂಧಿಸಿತ್ತು.
ರೈತ ಕುಟುಂಬದಲ್ಲಿ ಜನಿಸಿ, ವಿದ್ಯಾರ್ಥಿ ನಾಯಕನಾಗಿ ಈ ಮಟ್ಟಕ್ಕೆ ಬಂದಿದ್ದೇನೆ. ನನ್ನ ಜನರಿಗಾಗಿ ಎಂಥದ್ದೇ ಹೋರಾಟಕ್ಕೆ ಸಿದ್ಧವಾಗಿದ್ದೇನೆ. ಕಾನೂನುಗಳಿಗೆ ಬೆಲೆ ಕೊಟ್ಟು ಇದ್ದೆ. ಜೀವನದಲ್ಲಿ ದೊಡ್ಡ ಬದಲಾವಣೆ ಆಗಿದೆ. ಓದುತ್ತಿರಲಿಲ್ಲ, ಜೈಲಿಗೆ ಬಂದ ನಂತರ ಓದುವುದನ್ನು ಕಲಿತೆ. ಹಲವು ವಿಚಾರಗಳನ್ನು ತಿಳಿದುಕೊಂಡಿದ್ದೇನೆ. ಎಲ್ಲ ಸಮಾಜದವರ ಪರವಾಗಿ ಕೆಲಸ ಮಾಡಿದ್ದೇನೆ ಎಂದು ವಿನಯ ಕುಲಕರ್ಣಿ ಹೇಳಿದರು.
ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸುತ್ತಿದ್ದಾರೆ. ಕೋವಿಡ್ ಭೀತಿಯ ನಡುವೆಯೂ ಅಂತರವನ್ನೂ ಮರೆತು ತಮ್ಮ ನಾಯಕನನ್ನು ಬರಮಾಡಿಕೊಂಡ ಬೆಂಬಲಿಗರು.