ಇನ್ನೆರಡು ದಿನಗಳಲ್ಲಿ ಶಾಲೆ ಆರಂಭ : ಭಯಪಡದೇ ಬನ್ನಿ ಮಕ್ಕಳೇ ಎಂದ ಸಿಎಂ ಬಸವರಾಜ ಬೊಮ್ಮಾಯಿ

Spread the love

ಬೆಂಗಳೂರು : ರಾಜ್ಯದಲ್ಲಿ ಆಗಸ್ಟ್ 23ರಿಂದ 9, 10, 11 ಮತ್ತು 12ನೇ ತರಗತಿಗಳ ಶಾಲೆಗಳು ಆರಂಭಗೊಳ್ಳಲಿವೆ. ಈಗಾಗಲೇ ಶಾಲೆಗಳ ಆರಂಭಕ್ಕಾಗಿ ಶಿಕ್ಷಣ ಇಲಾಖೆ ಮಾರ್ಗಸೂಚಿ ಕೂಡ ಹೊರಡಿಸಿದ್ದು, ಆ ಮಾರ್ಗಸೂಚಿ ಕ್ರಮ ಅನುಸರಿಸಿ, ವಿದ್ಯಾರ್ಥಿಗಳನ್ನು ಸ್ವಾಗತಿಸಲು ಸಜ್ಜಾಗಿವೆ. ಈ ಹಿನ್ನಲೆಯಲ್ಲಿ ಶಾಲೆಗಳ ಆರಂಭಕ್ಕೆ ಎಲ್ಲಾ ಸಿದ್ಧತೆ, ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಮಕ್ಕಳು ಭಯಪಡೇ ಬನ್ನಿ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರೀತಿಯಿಂದ ಆಹ್ವಾನಿಸಿದ್ದಾರೆ.

ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪೋಷಕರು, ಶಾಲಾ ಆಡಳಿತ ಮಂಡಳಗಳು ಸೇರಿದಂತೆ ವಿವಿಧ ತಜ್ಞರ ಜೊತೆಗೆ ಚರ್ಚಿಸಿದ ನಂತ್ರವೇ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಈಗಾಗಲೇ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಯಾವ ರೀತಿ ಆರಂಭಿಸಬೇಕೆಂಬ ಬಗ್ಗೆಯೂ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ ಎಂದರು.

ನಾನು ಈಗಾಗಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಜೊತೆಗೆ ಮಾತನಾಡಿದ್ದೇನೆ. ಅಲ್ಲದೇ ನಾನು ಸಹ ಮೂರು ಶಾಲೆಗಳಿಗೆ ಭೇಟಿ ನೀಡಿ, ಕೊರೋನಾ ಭೀತಿಯ ನಡುವೆಯೂ ಆರಂಭಿಸಲಾಗುತ್ತಿರುವಂತ ಶಾಲೆಗಳಲ್ಲಿ ಯಾವ ರೀತಿಯಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಆರಂಭಿಸಲಾಗುತ್ತಿದೆ ಎಂಬುದನ್ನು ಪರಿಶೀಲಿಸಿರುವುದಾಗಿ ತಿಳಿಸಿದರು.

ಪೋಷಕರು ಕೊರೋನಾ ಲಸಿಕೆ ಕಡ್ಡಾಯವಾಗಿ ಪಡೆದು ಮಕ್ಕಳನ್ನು ಶಾಲೆಗೆ ಕರೆದು ತನ್ನಿ. ಯಾರೂ ಆತಂಕಕ್ಕೆ ಒಳಗಾಗದೇ, ಶಾಲೆಗೆ ಮಕ್ಕಳನ್ನು ಕಳುಹಿಸಿ. ಸರ್ಕಾರ ಎಲ್ಲಾ ರೀತಿಯ ಸಿದ್ಧತೆಗಳನ್ನು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನೆರಡು ದಿನಗಳಲ್ಲಿ ಆರಂಭಗೊಳ್ಳುತ್ತಿರುವಂತ ಶಾಲೆಗಳಿಗೆ ಭಯಪಡದೇ ಬನ್ನಿ ಮಕ್ಕಳೇ ಎಂದು ಸಿಎಂ ಪ್ರೀತಿಯಿಂದ ಆಹ್ವಾನಿಸಿದ್ದಾರೆ.