
ವಾಷಿಂಗ್ಟನ : ಆಫ್ಘಾನ್ ಬೆಳವಣಿಗೆ ಕುರಿತಂತೆ ತಾಲಿಬಾನ್ ಮುಖಂಡರೊಂದಿಗೆ ಅಮೆರಿಕಾ ಪ್ರತಿನಿತ್ಯ ಮಾತುಕತೆ ನಡೆಸುತ್ತಿದೆ. ರಾಜಕೀಯ ಮತ್ತು ಭದ್ರತೆ ಕುರಿತಂತೆ ತಾಲಿಬಾನ್ ಮುಖಂಡರೊಂದಿಗೆ ದಿನಂಪ್ರತಿ ಮಾತುಕತೆ ನಡೆಸುತ್ತಿರುವ ಅಮೆರಿಕಾ ಕಾಬೂಲ್ ವಿಮಾನ ನಿಲ್ದಾಣದಿಂದ ಜನರನ್ನು ಸ್ಥಳಾಂತರ ಮಾಡುವ ಬಗ್ಗೆಯೂ ತನ್ನ ಪರಮಾಪ್ತ ರಾಷ್ಟ್ರಗಳ ಮುಖಂಡರೊಂದಿಗೂ ಸಂಪರ್ಕದಲ್ಲಿದೆ ಎಂದು ಅಮೆರಿಕಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲಿವಾನ್ ತಿಳಿಸಿದ್ದಾರೆ.
ತಾಲಿಬಾನ್ ಮುಖಂಡರೊಂದಿಗೆ ಸತತ ಸಂಪರ್ಕದಲ್ಲಿದ್ದರೂ ಅವರ ಧೋರಣೆ ಬಗ್ಗೆ ನಮಗೆ ನಂಬಿಕೆ ಇಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಪಪಡಿಸಿದ್ದಾರೆ. ನಾವು ಆಫ್ಘಾನ್‍ನಲ್ಲಿನ ರಾಜಕೀಯ ಮತ್ತು ಭದ್ರತೆ ವಿಚಾರದಲ್ಲಿ ತಾಲಿಬಾನ್ ಮುಖಂಡರೊಂದಿಗೆ ಸತತ ಸಂಪರ್ಕದಲ್ಲಿದ್ದೇವೆ ಆದರೆ, ಮಾತುಕತೆ ವಿವರವನ್ನು ಸಧ್ಯ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ತಾಲಿಬಾನ್ ಮುಖಂಡರೊಂದಿಗೆ ಸ್ವತಃ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಮಾತುಕತೆ ನಡೆಸಿದ್ದಾರೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ನಾವು ನಮ್ಮ ಮಿತ್ರ ರಾಷ್ಟ್ರಗಳೊಂದಿಗೂ ಸಂಪರ್ಕದಲ್ಲಿದ್ದು, ಆಘ್ಘಾನ್ ಬೆಳವಣಿಗೆಯಲ್ಲಿ ನಾವು ಉತ್ತಮ ಫಲಿತಾಂಶ ಪಡೆಯಲಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.