ಪುನೀತ್​ ನೆನಪಲ್ಲಿ ಮತ್ತೊಂದು ದೊಡ್ಡ ಕಾರ್ಯಕ್ರಮ: ಕನ್ನಡ ಕಿರುತೆರೆ ವತಿಯಿಂದ ‘ಅಪ್ಪು ಅಮರ’

Spread the love

ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​ ಅವರ ನೆನಪಲ್ಲಿ ನ.28ರಂದು ಮತ್ತೊಂದು ದೊಡ್ಡ ಕಾರ್ಯಕ್ರಮ ನಡೆಯಲಿದೆ.

ಅಪ್ಪು ಸ್ಮರಣಾರ್ಥ ಸ್ಯಾಂಡಲ್​ವುಡ್​ನಿಂದ ನ.16ರಂದು ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ‘ಪುನೀತ ನಮನ’ ಕಾರ್ಯಕ್ರಮ ನಡೆದಿತ್ತು.

ದೊಡ್ಮನೆ ಕುಟುಂಬಸ್ಥರು, ದಕ್ಷಿಣ ಭಾರತದ ಸಿನಿದಿಗ್ಗಜರು ಪಾಲ್ಗೊಂಡು ಚಂದನವನದ ‘ರಾಜಕುಮಾರ’, ಕೋಟ್ಯಂತರ ಅಭಿಮಾನಿಗಳ ಪಾಲಿನ ಪ್ರೀತಿಯ ‘ಅಪ್ಪು’ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದರು. ‘ಸ್ವರಮಾಂತ್ರಿಕ’ರಿಂದ ‘ಅಭಿಮಾನಿಗಳ ದೇವರು’ಗೆ ಸ್ವರ ನಮನ ಮಾಡಲಾಗಿತ್ತು. ಇದೇ ರೀತಿ ಕಿರುತೆರೆ ಕಲಾವಿದರು ಮತ್ತು ತಂತ್ರಜ್ಞರಿಂದ ‘ಅಪ್ಪು ಅಮರ’ ಕಾರ್ಯಕ್ರಮ ನಡೆಯಲಿದೆ.ಅಪ್ಪು ಅಮರ ಕಾರ್ಯಕ್ರಮಕ್ಕೆ ರಾಘವೇಂದ್ರ ರಾಜ್​ಕುಮಾರ್​ ಅವರನ್ನ ಆಹ್ವಾನಿಸಲಾಯಿತು.

‘ಅಪ್ಪು ಅಮರ’ ಕಾರ್ಯಕ್ರಮವನ್ನು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಆಯೋಜಿಸಿದ್ದು, ನ.28ರ ಸಂಜೆ 4 ಗಂಟೆಗೆ ಜಯನಗರದ ನ್ಯಾಷನಲ್ ಕಾಲೇಜು ಆವರಣದ ಎಚ್.ಎನ್. ಕಲಾಕ್ಷೇತ್ರದಲ್ಲಿ ನಡೆಯಲಿದೆ. ‘ಅಪ್ಪು ಅಮರ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಡಾ.ರಾಜ್​ಕುಮಾರ್ ಕುಟುಂಬಸ್ಥರನ್ನು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ. ಶಿವಕುಮಾರ್ ಅವರ ನಿಯೋಗ ಆಹ್ವಾನಿಸಿದೆ. ಪುನೀತ್ ಸಹೋದರರಾದ ಶಿವರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್ ಮತ್ತು ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾರೆ.ಅಪ್ಪು ಅಮರ ಕಾರ್ಯಕ್ರಮಕ್ಕೆ ಶಿವರಾಜ್​ಕುಮಾರ್​ ಅವರನ್ನ ಆಹ್ವಾನಿಸಲಾಯಿತು.

ಪುನೀತ್​ ಅವರು ಸಿನಿಮಾ ಮಾತ್ರವಲ್ಲ, ಕಿರುತೆರೆಯಲ್ಲೂ ಛಾಪು ಮೂಡಿಸಿದ್ದರು. ಕನ್ನಡದ ‘ಕೋಟ್ಯಧಿಪತಿ’, ‘ಫ್ಯಾಮಿಲಿ ಪವರ್’​ ಶೋಗಳನ್ನು ನಡೆಸಿ ಜನಮನ್ನಣೆ ಗಳಿಸಿದ್ದರು. ನೇತ್ರಾವತಿ ಧಾರಾವಾಹಿಯನ್ನೂ ನಿರ್ಮಾಣ ಮಾಡಿದ್ದರು.

‘ಅಪ್ಪು ಅಮರ’ ಕಾರ್ಯಕ್ರಮದ ರೂಪುರೇಷೆ, ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ, ಯಾರೆಲ್ಲ ಭಾಗವಹಿಸಬಹುದು ಎಂಬುದರ ಮಾಹಿತಿ ಶೀಘ್ರವೇ ಹೊರಬರಲಿದೆ.