
ಬೆಂಗಳೂರು : ವಿಧಾನ ಪರಿಷತ್ತಿನ 25 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ನಿರೀಕ್ಷಿತ ಮಾಡಿದ್ದಕ್ಕಿಂತ ಕಮ್ಮಿ ಸೀಟು ಬಂದಿದ್ದರೆ, ಕಾಂಗ್ರೆಸ್ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಸೀಟನ್ನು ಗೆದ್ದು ಶಕ್ತಿ ಪ್ರದರ್ಶನ ಮಾಡಿದೆ. ಇನ್ನು, ಜೆಡಿಎಸ್ ಹೀನಾಯ ಪ್ರದರ್ಶನ ಇಲ್ಲೂ ಮುಂದುವರಿದಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಹನ್ನೊಂದು , ಜೆಡಿಎಸ್ ಎರಡು ಮತ್ತು ಪಕ್ಷೇತರರು ಒಂದೊಂದು ಸ್ಥಾನದಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಗೆದ್ದ ಪಕ್ಷೇತರ ಅಭ್ಯರ್ಥಿಯಾಗಿರುವ ಲಖನ್ ಜಾರಕಿಹೊಳಿಯವರು ಯಾವ ಪಕ್ಷಕ್ಕೆ ನಿಯತ್ತು ತೋರಲಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ವಿಧಾನ ಪರಿಷತ್ ಚುನಾವಣೆ ಬಿಜೆಪಿಗೆ ಹೇಗೆ ಮುಖ್ಯವೋ, ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಇದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಬಿಜೆಪಿ ಕಣಕ್ಕಿಳಿಸಿದ ಅಭ್ಯರ್ಥಿಗಳಲ್ಲಿ ಯಡಿಯೂರಪ್ಪನವರ ಬೆಂಬಲಿಗರೂ ಇದ್ದರು. ಚುನಾವಣೆಗೆ ಉತ್ತಮ ಪ್ರಚಾರವನ್ನೂ ಬಿಎಸ್ವೈ ಮಾಡಿದ್ದರು.
ವಿಧಾನ ಪರಿಷತ್ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಯಡಿಯೂರಪ್ಪನವರು ಫಲಿತಾಂಶ ಮತ್ತು ಜೆಡಿಎಸ್ ಜೊತೆಗಿನ ಮುಂದಿನ ದಿನಗಳಲ್ಲಿ ಹೊಂದಾಣಿಕೆಯ ಬಗ್ಗೆ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಬಿಎಸ್ವೈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಸಮೀಕರಣ ಬರೆಯುವ ಸಾಧ್ಯತೆಯಿಲ್ಲದಿಲ್ಲ.