ಗೆದ್ದೇ ಗೆಲ್ಲುತ್ತೇನೆಂದು ತೊಡೆ ತಟ್ಟಿದ್ದ ಡಾ.ಸುಧಾಕರ್: ಆಗಿದ್ದು ಮುಖಭಂಗ

Spread the love

ರಾಜ್ಯದ 25ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಯ ಪೈಕಿ ಕುತೂಹಲಕ್ಕೆ ಕಾರಣವಾಗಿದ್ದ ಕ್ಷೇತ್ರಗಳಲ್ಲಿ ಒಂದು ಕೋಲಾರ. ಯಾಕೆಂದರೆ, ಆ ಕ್ಷೇತ್ರವನ್ನು ಸಚಿವ ಡಾ.ಸುಧಾಕರ್ ಚಾಲೆಂಜ್ ಆಗಿ ತೆಗೆದುಕೊಂಡಿದ್ದರು.

ಬಿಜೆಪಿಗೆ ಕೋಲಾರ ಅಥವಾ ಚಿಕ್ಕಬಳ್ಳಾಪುರದಲ್ಲಿ ಅಷ್ಟಾಗಿ ನೆಲೆಯಿಲ್ಲ.

ಅಲ್ಲಿ ಏನಿದ್ದರೂ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಣಾಹಣಿ. ಆದರೆ, ಸುಧಾಕರ್ ಅವರು ಪಕ್ಷಾಂತರ ಮಾಡಿದ ನಂತರ, ಬಿಜೆಪಿ ತನ್ನ ಬೇರಲು ವಿಸ್ತರಿಸಲಾರಂಭಿಸಿತ್ತು.

ಕೋಲಾರ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರಲು ಡಾ.ಸುಧಾಕರ್ ಇನ್ನಿಲ್ಲದ ಸಾಹಸವನ್ನು ಮಾಡಿದ್ದರು. ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಗಿದ್ದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ಮೂಲಕ, ಬಿಜೆಪಿ ಮತ್ತು ಸುಧಾಕರ್ ಮುಖಭಂಗ ಎದುರಿಸುವಂತಾಗಿದೆ.

ಮತವೊಂದಕ್ಕೆ ಒಂದು ಲಕ್ಷ ರೂಪಾಯಿ ಕೊಡಲಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಹಣ ನೀಡಿ, ಧರ್ಮಸ್ಥಳ ಮಂಜುನಾಥಸ್ವಾಮಿ ಮತ್ತು ತಿರುಪತಿ ತಿಮ್ಮಪ್ಪನ ಫೋಟೋದ ಮೇಲೆ ಆಣೆ ಮಾಡಿಸಿಕೊಳ್ಳಲಾಗುತ್ತಿದೆ ಎನ್ನುವ ಸುದ್ದಿಯೂ ಹರಿದಾಡುತ್ತಿತ್ತು. ವರ್ತೂರು ಪ್ರಕಾಶ್ ಮನೆಯಲ್ಲಿ ಎಂದು ಹೇಳಲಾಗುತ್ತಿರುವ ಹಣ ಹಂಚುತ್ತಿದ್ದ ಮತ್ತು ಆಣೆ ಮಾಡಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ಡಾ.ಸುಧಾಕರ್ ನಡುವಿನ ಪ್ರತಿಷ್ಠೆಯ ಕಣವಾಗಿದ್ದ ಕೋಲಾರದಲ್ಲಿ ಕಾಂಗ್ರೆಸ್ಸಿನ ಅನಿಲ್ ಕುಮಾರ್ ಅವರು ಬಿಜೆಪಿಯ ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಕೆ.ಎನ್.ವೇಣುಗೋಪಾಲ್ ವಿರುದ್ದ ಗೆಲುವು ಸಾಧಿಸಿದ್ದಾರೆ. ಅಲ್ಲಿಗೆ, ಕ್ಷೇತ್ರ ಗೆಲ್ಲುತ್ತೇನೆಂದು ಪಣತೊಟ್ಟಿದ್ದ ಆರೋಗ್ಯ ಸಚಿವ ಡಾ.ಸುಧಾಕರ್ ಅವರಿಗೆ ಭಾರೀ ಹಿನ್ನಡೆಯಾಗಿದೆ. ಬಿಜೆಪಿಗೆ ನೆಲೆಯಿಲ್ಲದ ಕ್ಷೇತ್ರದಲ್ಲಿ ಗೆದ್ದು, ಪಕ್ಷದಲ್ಲಿ ಹಿಡಿತ ಸಾಧಿಸಬಹುದು ಎನ್ನುವ ಸುಧಾಕರ್ ಲೆಕ್ಕಾಚಾರ ಉಲ್ಟಾ ಹೊಡೆದಿದೆ.

ಕಾಂಗ್ರೆಸ್ಸಿನ ಎಂ.ಎಲ್​. ಅನಿಲ್​ ಕುಮಾರ್​​ 2,340 ಮತಗಳನ್ನು ಪಡೆದು ಗೆಲುವು

ಕೋಲಾರ ವಿಧಾನ ಪರಿಷತ್​ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಎಂ.ಎಲ್​. ಅನಿಲ್​ ಕುಮಾರ್​​ 2,340 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಇವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಡಾ.ವೇಣುಗೋಪಾಲ್ ವಿರುದ್ದ 445 ಮತಗಳ ಅಂತರದಿಂದ ಗೆದ್ದಿದ್ದಾರೆ. ಬಿಜೆಪಿ ಅಭ್ಯರ್ಥಿಗೆ 1,895 ಮತಗಳು ಬಂದಿದೆ. ಕಾಂಗ್ರೆಸ್ಸಿನ ಜಿಲ್ಲೆಯ ಕೆಲವು ಪ್ರಮುಖ ಮುಖಂಡರು ಚುನಾವಣೆಯ ವೇಳೆ ಕಾಂಗ್ರೆಸ್ಸಿನಿಂದ ಬಿಜೆಪಿಗೆ ನಿಯತ್ತು ಬದಲಾಯಿಸಿದ್ದರು.

ಕೋಲಾರದ ಮತ್ತೋರ್ವ ಕಾಂಗ್ರೆಸ್ ಮುಖಂಡ ವರ್ತೂರು ಪ್ರಕಾಶ್ ಕೋಲಾರ ಕ್ಷೇತ್ರವನ್ನು ಗೆಲ್ಲಿಸಲು ಡಾ.ಸುಧಾಕರ್ ಭಾರೀ ಪ್ರಯತ್ನವನ್ನು ಮಾಡಿದ್ದರು. ಜಿಲ್ಲೆಯ ಕಾಂಗ್ರೆಸ್ ನಾಯಕ ಮತ್ತು ಪ್ರಭಾವೀ ಮುಖಂಡ ಚಂದ್ರ ರೆಡ್ಡಿಯವರನ್ನು ಸುಧಾಕರ್ ಅವರು ಬಿಜೆಪಿಗೆ ತರುವಲ್ಲಿ ಯಶಸ್ವಿಯಾಗಿದ್ದರು. ಇದರ ಜೊತೆಗೆ, ಕೋಲಾರದ ಮತ್ತೋರ್ವ ಕಾಂಗ್ರೆಸ್ ಮುಖಂಡ ವರ್ತೂರು ಪ್ರಕಾಶ್ ಅವರನ್ನು ಬಿಜೆಪಿ ಸೇರಿಸಿಕೊಳ್ಳುವಲ್ಲೂ ಡಾ.ಸುಧಾಕರ್ ಯಶಸ್ಸು ಕಂಡಿದ್ದರು.

ವಿಧಾನ ಪರಿಷತ್ ಚುನಾವಣೆ – ಕೋಲಾರದಲ್ಲಿ ಕಾಂಗ್ರೆಸ್ ಗೆಲುವು ಈ ಎಲ್ಲಾ ಬೆಳವಣಿಗೆಗಳು ಕಾಂಗ್ರೆಸ್ಸಿಗೆ ಹಿನ್ನಡೆಯಾಗಬಹುದೆಂದು ಭಾವಿಸಲಾಗಿತ್ತು. ಕಾಂಗ್ರೆಸ್ಸಿನಿಂದ ಎಂ.ಎಲ್.ಅನಿಲ್ ಕುಮಾರ್, ಜೆಡಿಎಸ್ಸಿನಿಂದ ವಕ್ಕಲೇರಿ ರಾಮಚಂದ್ರ ಮತ್ತು ಬಿಜೆಪಿಯಿಂದ ಡಾ.ಕೆ.ಎನ್.ವೇಣುಗೋಪಾಲ್ ಕಣದಲ್ಲಿದ್ದರು. ಬಿಜೆಪಿಗೆ ಒಳ ಏಟಿನ ಕಾವು ವಿಧಾನ ಪರಿಷತ್ ಚುನಾವಣೆಯಲ್ಲಿ ಜೋರಾಗಿ ಬಿದ್ದಂತೆ ಕಾಣುತ್ತಿದೆ.