ಕಾನೂನು ಕಾಯ್ದೆಗಳಿಗಿಂತ ಮಾನವೀಯತೆ ದೊಡ್ಡದು: ರವಿ ಚನ್ನಣ್ಣನವರ್‌

Spread the love

ಉಡುಪಿ: ಕಾನೂನಿಗಿಂತ ಧರ್ಮ ದೊಡ್ಡದು, ಕಾಯ್ದೆಗಳಿಗಿಂತ ಮಾನವೀಯತೆ ದೊಡ್ಡದಾಗಿದ್ದು, ತಪ್ಪಿಗೆ ಶಿಕ್ಷೆಯೊಂದೇ ಪರಿಹಾರವಾಗಬಾರದು ಎಂದು ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಹೇಳಿದರು.

ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಅದಮಾರು ಮಠದ ‘ವಿಶ್ವಾರ್ಪಣಂ’ ಕಾರ್ಯಕ್ರಮದಲ್ಲಿ‌ ‘ಪ್ರಜ್ಞಾವಂತ ಸಮಾಜ ನಿರ್ಮಾಣ’ ವಿಷಯದ ಕುರಿತು ಮಾತನಾಡಿದ ಅವರು, ನಮ್ಮೊಳಗಿನ ಜ್ಞಾನ ಅಧಿಕಾರ ಸ್ವಸ್ಥ ಸಮಾಜವನ್ನು ಕಟ್ಟಲು, ಮತ್ತೊಬ್ಬರ ಹಸಿವು ನೀಗಿಸಲು, ಜ್ಞಾನ ದಾಹವನ್ನು ನೀಗಿಸಲು, ಸ್ವಾಬಿಮಾನಿಯಾಗಿ ಬದಕಲು ಪ್ರೇರೇಪಣೆ ನೀಡಬೇಕು ಎಂದರು.

ಅಧಿಕಾರದ ದರ್ಪ, ಹಣದ ಅಹಂಕಾರ ಮತ್ತೊಬ್ಬರ ಜೀವನವನ್ನು ಹಾಳುಗೆಡುವಬಾರದು. ತಪ್ಪು ಮಾಡಿದವರಿಗೂ ತಿದ್ದಿಕೊಳ್ಳಲು ಅವಕಾಶ ನೀಡಬೇಕು. ಕರ್ತವ್ಯದ ವಿಮುಖತೆ ಸಮಾಜದ ಎಲ್ಲ ಅವಘಡಗಳಿಗೂ ಕಾರಣವಾಗಿದ್ದು, ಕರ್ತವ್ಯದಲ್ಲಿ ಶ್ರೇಷ್ಠತೆ ಮೆರೆದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಲಹೆ ನೀಡಿದರು.

‘ಸ್ವಸ್ಥ ಸಮಾಜ, ದೇಶ ನಿರ್ಮಾಣವಾಗಬೇಕಾದರೆ, ಶುದ್ಧ ಮನಸ್ಸುಗಳು ಹಾಗೂ ವ್ಯಕ್ತಿತ್ವಗಳ ನಿರ್ಮಾಣವಾಗಬೇಕು. ಕಾಯ್ದೆ ಕಾನೂನುಗಳಿಂದ ವ್ಯಕ್ತಿಯನ್ನು ದೈಹಿಕವಾಗಿ ನಿಯಂತ್ರಿಸಬಹುದೇ ಹೊರತು ಮಾನಸಿಕವಾಗಿ ನಿಯಂತ್ರಿಸಲು ಸಾಧ್ಯವಿಲ್ಲ. ವ್ಯಕ್ತಿಯ ಹಾವ, ಭಾವ, ಆಲೋಚನೆಗಳು ನಕಾರಾತ್ಮಕವಾದರೆ ಆತ ಸಮಾಜದ ಆಸ್ತಿಯಾಗಲಾರ. ಸಮಾಜ ಸ್ಮರಿಸುವ ರೀತಿಯಲ್ಲಿ ಬದುಕಬೇಕು. ಉದಾತ್ತ ವಿಚಾರಗಳು ಸಮಾಜವನ್ನು ಸದಾ ಆಳಬೇಕು ಎಂದರು.

ಪೋಷಕರು ಮಕ್ಕಳನ್ನು ನಿಂದಿಸುವ ಬದಲು ಅವರೊಳಗಿರುವ ಶಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಉತ್ತಮ ವಿಚಾರಗಳನ್ನು ತಿಳಿಸುವ ಮೂಲಕ ಪ್ರಜ್ಞಾವಂತ ನಾಗರಿಕರನ್ನಾಗಿ ರೂಪಿಸಬೇಕು. ಬದುಕಿಗೆ ಸರಿ ಮಾರ್ಗ ತೋರಿಸಬೇಕು ಎಂದು ರವಿ ಚನ್ನಣ್ಣನವರ್ ಹೇಳಿದರು.

ಪರ್ಯಾಯ ಪೀಠಾಧೀಶರಾದ ಈಶಪ್ರಿಯತೀರ್ಥ ಸ್ವಾಮೀಜಿ, ರಿಕ್ಷಾ ಚಾಲಕರಾದ ಎಸ್.ವೆಂಕಟೇಶ ಪೈ, ಪೌರಕಾರ್ಮಿಕರಾದ ದಂಡ್ಯಮ್ಮ ಹಾಗೂ ವಿಜಯ ಅವರನ್ನು ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು, ‘ನಿಷ್ಠೆಯಿಂದ ಯಾವುದೇ ಕಾರ್ಯ ಮಾಡಿದರೂ ದೇವರ ಅನುಗ್ರಹ ಖಂಡಿತವಾಗಿ ದಕ್ಕಲಿದೆ ಎಂದರು.

ಮೂಡಬಿದರೆಯ ಕಾರಿಂಜೆ ಮಠದ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ‘ರಾಮನು ಹನುಮನ ಭಕ್ತಿಯನ್ನು ಒಪ್ಪಿಕೊಂಡಂತೆ ಗುರುಗಳ ಮೂಲಕ ದೇವರನ್ನು ಕಾಣಬೇಕು ಎಂದರು. ಆರ್ಥಿಕ ತಜ್ಞ ಎಸ್‌.ವಿಶ್ವನಾಥ ಭಟ್ಟ, ನಟ ರಮೇಶ್ ಭಟ್‌, ದೈವಾರಾಧಕ ಕುಮಾರ್ ಪಂಬದ ಮೂಲ್ಕಿ ಇದ್ದರು. ಮಠದ ವ್ಯವಸ್ಥಾಪಕರಾದ ಗೋವಿಂದರಾಜ್ ಸ್ವಾಗತಿಸಿದರು. ಮಠದ ಆಸ್ಥಾನ ವಿದ್ವಾಂಸ ಕೃಷ್ಣರಾಜ ಭಟ್ ಕುತ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.