
ಮುಂಡಗೋಡ : ಪೊಲೀಸ ಜೀಪಗೆ ಡಿಸೇಲ್ ಹಾಕಿಸಿ ಹಣ ನೀಡದೇ ಹೋಗಿದ್ದಕ್ಕೆ ಡಿಸೇಲ್ ಹಣ ನೀಡುವಂತೆ ಪೆಟ್ರೋಲ್ ಬಂಕನ ಸಿಬ್ಬಂದಿ ಕೇಳಿದ್ದಕ್ಕೆ ಪೊಲೀಸ ಠಾಣೆಗೆ ಕರೆಸಿ ಆತನನ್ನು ಥಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರಾಘು ಎಂಬ ಯುವಕನೇ ಪೊಲೀಸರ ದೌರ್ಜನ್ಯಕ್ಕೊಳಗಾದ ಪೆಟ್ರೋಲ್ ಬಂಕ್ ಸಿಬ್ಬಂದಿಯಾಗಿದ್ದಾನೆ.
ಮುಂಡಗೋಡ ಪೊಲೀಸ ಠಾಣೆಯ ಪೊಲೀಸನೊಬ್ಬ ಸೋಮವಾರ ಪೊಲೀಸ ಜೀಪಗೆ ಪೆಟ್ರೋಲ ಬಂಕನಲ್ಲಿ ಡಿಸೇಲ್ ಹಾಕಿಸಿಕೊಂಡಿದ್ದಾನೆ. ಡಿಸೇಲ ಹಾಕಿಸಿದ ಸಿಬ್ಬಂದಿ ರಾಘು ಹಣ ಕೇಳಿದಾಗ ಸಂಜೆ ಕೊಡುವುದಾಗಿ ಹೇಳಿ ಹೋದ ಪೊಲೀಸರು ಹಣ ನೀಡಲಿಲ್ಲ ಎನ್ನಲಾಗಿದೆ. ರಾಘು ಪೊಲೀಸನಿಗೆ ಕರೆ ಮಾಡಿದಾಗ ಪೊಲೀಸನು ಅವಾಚ್ಯ ಶಬ್ದದಿಂದ ಬೈಯ್ದು ಠಾಣೆಗೆ ಕರೆಸಿದ್ದಾನೆ. ಠಾಣೆಗೆ ರಾಘು ಬಂದಾಗ ಆತನನ್ನು ಥಳಿಸಲಾಗಿದೆ ಎಂದು ಹೇಳಲಾಗಿದೆ.

ಥಳಿತಕ್ಕೊಳಗಾದ ದಲಿತ ಯುವಕ ರಾಘು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ನಂತರ ಈ ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಪೊಲೀಸ ಮೇಲೆ ಕ್ರಮಕ್ಕೆ ಆಗ್ರಹ :
ಪೊಲೀಸ ಜೀಪಗೆ ಹಾಕಿಸಿದ ಡಿಸೇಲ ಹಣ ಕೇಳಿದ್ದಕ್ಕೆ ಠಾಣೆಯಲ್ಲಿ ಪೆಟ್ರೋಲ ಬಂಕ್ ಸಿಬ್ಬಂದಿ ರಾಘು ಎಂಬಾತನನ್ನು ಥಳಿಸಿದ ಪೊಲೀಸನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಚಿದಾನಂದ ಹರಿಜನ ಆಗ್ರಹಿಸಿದ್ದಾರೆ.
***
