16ರಂದು ಕಾರವಾರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ

Spread the love

ಕಾರವಾರ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜುಲೈ 16ರಂದು ಕಾರವಾರಕ್ಕೆ ಆಗಮಿಸುತ್ತಿದ್ದಾರೆ. ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಬಗ್ಗೆ ಶಾಸಕಿ ರೂಪಾಲಿ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ಮಾರ್ಚ್ ತಿಂಗಳಿನಲ್ಲಿಯೇ ಶಾಸಕಿ ರೂಪಾಲಿ ನಾಯ್ಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಲಿಖಿತ ಮನವಿ ಮಾಡಿ, ಕ್ಷೇತ್ರಕ್ಕೆ ಆಗಮಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸುವಂತೆ ಕೋರಿದ್ದರು. ಆ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿಎಸ್‌ವೈ ಕಾರವಾರಕ್ಕೆ ಆಗಮಿಸಿ  ಉದ್ಘಾಟನೆ ನೆರವೇರಿಸಲು ಸಮ್ಮತಿಸಿದ್ದಾರೆ.

ಬೆಳಗಾವಿ ಉಪಚುನಾವಣೆ,ಕೊರೋನಾ ಹೆಚ್ಚಳ ಇನ್ನಿತರ ಕಾರಣದಿಂದ ಸಿಎಂಗೆ ಬರಲು ಸಾಧ್ಯವಾಗಿರಲಿಲ್ಲ. ಮತ್ತೆ ಸಿಎಂಗೆ ಶಾಸಕಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಜುಲೈ 16ರಂದು ಮುಖ್ಯಮಂತ್ರಿ ಕಾರವಾರಕ್ಕೆ ಬರಲಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಮುಖ್ಯಮಂತ್ರಿ ಕಾರ್ಯಾಲಯದಿಂದ ಪತ್ರ ಬರೆದು ಅಧಿಕೃತ ಮಾಹಿತಿ ನೀಡಲಾಗಿದೆ.

ಸಿಎಂ ಯಡಿಯೂರಪ್ಪ ಕಾರವಾರ ಮೆಡಿಕಲ್ ಕಾಲೇಜು ಆವರಣದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ 450 ಹಾಸಿಗೆ ಸುಸಜ್ಜಿತ ಆಸ್ಪತ್ರೆ ಕಟ್ಟಡ ಕಾಮಗಾರಿ, ಮಾಲಾದೇವಿ ಮೈದಾನ ಮೇಲ್ದರ್ಜೆಗೇರಿಸುವ ಕಾಮಗಾರಿ,ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಕಾಮಗಾರಿ,ಲೋಕೋಪಯೋಗಿ ಇಲಾಖೆ ನೂತನ ಕಟ್ಟಡ ಹಾಗೂ ಪ್ರವಾಸಿ ಮಂದಿರ ನೂತನ ಕಟ್ಟಡ ಕಾಮಗಾರಿ, ರಾಮನಗುಳಿ ಕಲ್ಲೇಶ್ವರ ನಡುವಿನ ಸೇತುವೆ ಕಾಮಗಾರಿ,ಸುಂಕಸಾಳ ಹಾಗೂ ಡೋಂಗ್ರಿ ನಡುವೆ ತೂಗು ಸೇತುವೆ ಕಾಮಗಾರಿ,ಇಂದಿರಾ ಗಾಂಧಿ ವಸತಿ ಶಾಲೆ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.