ಮುಂಡಗೋಡ: ಪ್ರತಿವರ್ಷ ಅಕ್ಟೋಬರ, ನವೆಂಬರ್ ತಿಂಗಳಲ್ಲಿ ತಾಲೂಕಿಗೆ ಆಗಮಿಸುತ್ತಿದ್ದ ಕಾಡಾನೆಗಳ ಹಿಂಡು ಈ ಬಾರಿ ಜುಲೈ ತಿಂಗಳಲ್ಲಿಯೇ ಗುಂಜಾವತಿ ಭಾಗದಲ್ಲಿ ಆಗಮಿಸಿ, ಬೆಳೆಗಳನ್ನು ಹಾಳು ಮಾಡುತ್ತಿದೆ.
ಪ್ರತಿವರ್ಷ ಭತ್ತ ಹಾಗೂ ಗೋವಿನಜೋಳದ ಬೆಲೆ ಕಟಾವ್ ಹಂತಕ್ಕೆ ಬಂದಾಗ ದಾಂಡೇಲಿ ಭಾಗದಿಂದ ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳು ತಾಲೂಕಿಗೆ ಆಗಮಿಸಿ ಎರಡ್ಮೂರು ತಿಂಗಳ ಕಾಲ ತಾಲೂಕಿನ ವಿವಿಧಡೆ ಸಂಚರಿಸಿ ಮರಳಿ ಹೋಗುತ್ತಿದ್ದವು. ಆದರೆ ಈ ವರ್ಷಎಂಟು ಕಾಡಾನೆಗಳ ತಂಡ ಕಳೆದ ಎರಡುದಿನಗಳಿಂದ ತಾಲೂಕಿನ ಗುಂಜಾವತಿ ಭಾಗದಲ್ಲಿ ಬೀಡು ಬಿಟ್ಟಿವೆ.
ಕಬ್ಬು ಹಾಗೂ ಅಡಕೆ ನಾಶ: ಎಂಟು ಕಾಡಾನೆಗಳ ತಂಡ ತಾಲೂಕಿನ ಗುಂಜಾವತಿ ವ್ಯಾಪ್ತಿಯ ಉಗ್ನಿಕೇರಿ ಭಾಗದಲ್ಲಿ ಕಬ್ಬು ಹಾಗೂ ಅಡಕೆ ಬೆಳೆಗಳನ್ನು ನಾಶ ಪಡಿಸಿವೆ. ರಾತ್ರಿ ವೇಳೆ ಗುರುಬಸಯ್ಯ ಹಿರೇಮಠ ಎಂಬವರ ಕಬ್ಬಿನ ಗದ್ದೆಗೆ ದಾಳಿ ನಡೆಸಿರುವ ಕಾಡಾನೆಗಳು ಕಬ್ಬನ್ನು ತಿಂದು ತುಳಿದಾಡಿ ಕಬ್ಬಿನ ಗದ್ದೆಯಲ್ಲಿಯೆ ಮಲಗಿ ಹೋಗಿವೆ. ಇದರಿಂದಾಗಿ ಒಂದು ಎಕರೆಗೆ ಅಧಿಕ ಕಬ್ಬು ಬೆಳೆ ಸಂಪೂರ್ಣ ನಾಶವಾಗಿದೆ. ಪಕ್ಕದಲ್ಲಿನ ಅಡಕೆ ತೋಟಕ್ಕೆ ಸಹ ದಾಳಿ ನಡೆಸಿರುವ ಕಾಡಾನೆಗಳು ಕೆಲ ಅಡಕೆ ಸಸಿಗಳನ್ನು ಕಿತ್ತು ಹಾಕಿವೆ.
ಲದ್ದಿಗೆ ಪೂಜೆ : ಒಂದೆಡೆ ಕಡಾನೆಗಳ ಹಿಂಡು ಬೆಳೆಗಳನ್ನು ಹಾಳು ಮಾಡುತ್ತಿದ್ದರೆ ಮತ್ತೊಂದೆಡೆ ರೈತರು ಕಡಾನೆಯ ಲದ್ದಿಗೆ ಹೂವು ಇಟ್ಟು ಪೂಜೆ ಮಾಡುತ್ತಿದ್ದಾರೆ. ಬಿತ್ತನೆಯಾದ ಕೆಲ ದಿನಗಳಲ್ಲಿಯೇ ಕಾಡಾನೆಗಳು ತಮ್ಮ ಹೊಲಕ್ಕೆ ಬಂದಿರುವುದರಿಂದ ಮುಂದೆ ಬೆಳೆ ಚನ್ನಾಗಿ ಬರುವುದೆಂದು ಕಾಡಾನೆಯ ಲದ್ದಿಗೆ ಕೆಲವು ರೈತರು ಪೂಜೆ ಸಲ್ಲಿಸುತ್ತಿದ್ದಾರೆ.
ಹೇಳಿಕೆ : ಅಕ್ಟೋಬರ, ನವೆಂಬರ್ ತಿಂಗಳಲ್ಲಿ ಬರುತ್ತಿದ್ದ ಕಡಾನೆಗಳು ಈ ಬಾರಿ ಜುಲೈ ತಿಂಗಳಲ್ಲಿ ಬಂದಿದೆ. ನಾವು ಕಬ್ಬು ಬೆಳೆದಿದ್ದು, ಈಗ ಕಾಡಾನೆಗಳು ಒಂದು ಏಕರೆಯಷ್ಟು ತುಳಿದು, ತಿಂದು ಹಾಳು ಮಾಡಿದೆ ಎಂದು ರೈತ ಗುರುಬಸಯ್ಯ ಹಿರೇಮಠ ತಿಳಿಸಿದ್ದಾರೆ.