ಹೊನ್ನಾವರ : ಅಣ್ಣ ತಮ್ಮಂದಿರ ಜಗಳದಲ್ಲಿ ತಮ್ಮನ ತಲೆಗೆ ಕತ್ತಿಯಿಂದ ಬಲವಾಗಿ ಹೊಡೆದು ಅಣ್ಣ ಕೊಲೆ ಮಾಡಿರುವ ಘಟನೆ ತಡರಾತ್ರಿ ಹೊನ್ನಾವರದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿ ಅರ್ಜುನ್ ಶಂಕರ ಮೇಸ್ತ (23) ಎಂದು ಗುರುತಿಸಲಾಗಿದೆ. ಹೊನ್ನಾವರ ಪಟ್ಟಣದಿಂದ ತಾರೀಬಾಗಿಲಿಗೆ ಹೋಗುವ ಚರ್ಚ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ 23 ವರ್ಷದ ಅರ್ಜುನ್ ಮೇಸ್ತ ಎಂಬ ಯುವಕನ ತಲೆಗೆ ಕತ್ತಿಯಿಂದ ಭೀಕರವಾಗಿ ಹೊಡೆದು,ಕೋಣೆಯೊಂದರಲ್ಲಿ ಕೂಡಿ ಹಾಕಿ ಅಣ್ಣ ಪರಾರಿಯಾಗಿದ್ದ ಎನ್ನಲಾಗಿದೆ. ತಾಯಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಈ ಘಟನೆ ನಡೆದಿದ್ದು,ಮನೆಯ ಅಕ್ಕ ಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ತಮ್ಮ ಅರ್ಜುನ್ ಕೊನೆಯುಸಿರೆಳೆದಿದ್ದ. ಕೆಳಗಿನಪಾಳ್ಯಾದಲ್ಲಿ ಅವಿತುಕೊಂಡಿದ್ದ ಆರೋಪಿ ಕೃಷ್ಣ ಶಂಕರ ಮೇಸ್ತನನ್ನು (25) ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೊನ್ನಾವರ ಪೊಲೀಸರು ಘಟನಾ ಸ್ಥಳವನ್ನು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.