ಮುಂಡಗೋಡ : ನೂತನವಾಗಿ ನಿರ್ಮಾಣವಾಗುತ್ತಿರುವ ಬಸ್ ನಿಲ್ದಾಣದ ಹಿಂಬದಿಯಲ್ಲಿದ್ದ ತಾತ್ಕಾಲಿಕ ಶೌಚಾಲಯ ತೆರವುಗೊಳಿಸದ ಪರಿಣಾಮ ಬಸ್ ನಿಲ್ದಾಣದಲ್ಲಿ ಶೌಚಾಲಯವಿಲ್ಲದೆ ಪ್ರಯಾಣಿಕರು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಪಟ್ಟಣದಲ್ಲಿ ಮೂರುಕೋಟಿರೂ. ಅನುದಾನದಲ್ಲಿ ಹೈಟೇಕ್ ಬಸ್ ನಿಲ್ದಾಣ ನಿರ್ಮಿಸ ಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು ಆದರೆ ಕೋವಿಡ್ ನಿಂದ ಸರಕಾರ ಲಾಕ್‌ಡೌನ್ ಜಾರಿ ಮಾಡಿದ ಪರಿಣಾಮ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು ಇದೀಗ ಮುಕ್ತಾಯ ಹಂತ ತಲುಪಿದೆ. ಕೆಲವೆ ತಿಂಗಳಲ್ಲಿ ಹೈಟೆಕ್ ಬಸ್ ನಿಲ್ದಾಣ ಸಾರ್ವಜನಿಕರ ಬಳಕೆಗೆ ಸಿಗಲಿದೆ.
ಹಳೆಯ ಬಸ್ ನಿಲ್ದಾಣ ಕಟ್ಟಡ ತೆರವುಗೊಳಿಸಿದ ವೇಳೆ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಲಾಗಿತ್ತು. ಒಂದು ಕಡೆ ನಿರ್ವಾಹಕ ಅಧಿಕಾರಿ ಹಾಗೂ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಮತ್ತೊಂದು ಕಡೆಯಲ್ಲಿ ಸಾರ್ವಜನಿಕ ಶೌಚಾಲಯವನ್ನು ಮಾಡಲಾಗಿತ್ತು. ಇದರಿಂದಾಗಿ ಸಾರ್ವಜನಿಕರಿಗೆ ಸ್ವಲ್ಪ ಮೆಟ್ಟಿಗೆ ಅನುಕೂಲವಾಗಿತ್ತು.
ಶೌಚಾಲಯ ತೆರವು: ನೂತನ ಬಸ್ ನಿಲ್ದಾಣ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು ಆದರೆ ನಿಲ್ದಾಣದ ಆವರಣದಲ್ಲಿದ್ದ ತಾತ್ಕಾಲಿಕ ಶೆಡ್ ಹಾಗೂ ಶೌಚಾಲಯ ತೆರವುಗೊಳಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ನಿಂತು ಬಸ್ ಬಂದ ನಂತರ ಹತ್ತಿ ಹೋಗುತ್ತಿದ್ದಾರೆ. ಅಲ್ಲದೆ ಸಾರಿಗೆ ನಿರ್ವಾಹಕರು ಸಹ ನೂತನ ಕಟ್ಟಡದ ಕೊಠಡಿಯೊಂದರಲ್ಲಿ ಕುಳಿತು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಶೌಚಾಲಯ ತೆರವುಗೊಳಿಸಿದ ಪರಿಣಾಮ ಸಾರ್ವಜನಿಕರು ಶೌಚಾಲಯಕ್ಕೆ ಹೋಗಲು ಪರದಾಡುತ್ತಿದ್ದಾರೆ.
ಸಾರ್ವಜನಿಕರ ಪರದಾಟ: ಇದೀಗ ಲಾಕ್‌ಡೌನ್ ತೆರವುಗೊಳಿಸಿದ ನಂತರ ಪ್ರತಿದಿನ ಮುಂಡಗೋಡ ಮಾರ್ಗವಾಗಿ ನೂರಾರು ಬಸ್‌ಗಳು ಸಂಚರಿಸುತ್ತಿವೆ. ಬಸ್‌ನಲ್ಲಿನ ಕೆಲ ಪ್ರಯಾಣಿಕರು ಶೌಚಕ್ಕಾಗಿ ಬಸ್ ಇಳಿಯುತ್ತಾರೆ. ಆದರೆ ನಿಲ್ದಾಣದ ಹಿಂಬದಿ ಅಥವಾ ಪಕ್ಕದಲ್ಲಿ ಶೌಚಾಲಯ ಇಲ್ಲದಿರುವುದು ಕಂಡು ಹಿಡಿಶಾಪ ಹಾಕುತ್ತಾ ಹೋಗುತ್ತಿದ್ದಾರೆ. ಅಲ್ಲದೆ ಬಸ್ ನಿಲ್ದಾಣದ ಸನಿಹದಲ್ಲಿ ಯಾವುದೇ ಸಾರ್ವಜನಿಕ ಶೌಚಾಲಯಗಳು ಇಲ್ಲ.
ಈ ಕುರಿತು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಕೂಡಲೆ ಬಸ್ ನಿಲ್ದಾಣದ ಹಿಂಬದಿ ಪ್ರಯಾಣಿಕರ ಅನುಕೂಲಕ್ಕಾಗಿ ಶೌಚಾಲಯ ವ್ಯವಸ್ಥೆ ಮಾಡಬೇಕು ಎಂಬುದು ಸಾರ್ವಜನಿಕರ, ಪ್ರಯಾಣಿಕರ ಆಗ್ರಹವಾಗಿದೆ.