ಬಂಗಾರ ನೀಡುವುದಾಗಿ ೨೮ಲಕ್ಷರೂ. ಪಂಗನಾಮ

Spread the love

ಮುಂಡಗೋಡ: ಅಪರಿಚಿತ ವ್ಯಕಿಗಳು ಕಡಿಮೆ ಬೆಲೆಗೆ ಬಂಗಾರ ನೀಡುವುದಾಗಿ ನಂಬಿಸಿ ಹಣ ತೆಗೆದುಕೊಂಡು ಬಂಗಾರ ಖರೀದಿಗೆ ಬಂದಿದ್ದ ವ್ಯಾಪಾರಸ್ಥರ ೨೮ಲಕ್ಷ ರೂ. ಹಣದ ಬ್ಯಾಗ್‌ನ್ನು ಕಸಿದುಕೊಂಡು ಪರಾರಿಯಾದ ಘಟನೆ ತಾಲೂಕಿನ ಮಳಗಿ ಧರ್ಮಾ ಜಲಾಶಯದ ಬಳಿ ಶುಕ್ರವಾರ ಜರುಗಿದೆ.

ಚಿಕ್ಕೋಡಿ ತಾಲೂಕಿನ ಶಿವನಗೌಡ ಪಾಟೀಲ ಹಾಗೂ ಆತನ ಸ್ನೇಹಿತ ಅಸ್ಲಂ ನದಾಫ್ ಎಂಬವರೆ ಹಣ ಕಳೆದುಕೊಂಡ ವ್ಯಾಪಾರಸ್ಥರಾಗಿದ್ದಾರೆ.

ನಮಗೆ ಹಳೆಯ ಬಂಗಾರದ ಸಿಕ್ಕಿದೆ ಅದನ್ನು ಮಾರಾಟ ಮಾಡುತ್ತೇವೆ ಎಂದು ಶಿವನಗೌಡ ಪಾಟೀಲಗೆ ಅಪರಿಚಿತರು ನಂಬಿಸಿ ಅರ್ಧ ಕೆಜಿಗೂ ಅಧಿಕ ಬಂಗಾರ ನೀಡುತ್ತೇವೆ. ಮಳಗಿ ಧರ್ಮಾ ಜಲಾಶಯದ ಬಳಿ ಬನ್ನಿ ಎಂದು ತಿಳಿಸಿದ್ದಾರೆ. ಅದನ್ನು ನಂಬಿದ ಶಿವನಗೌಡ ಹಾಗೂ ಅಸ್ಲಂ ಕಾರ್‌ನಲ್ಲಿ ಹಣ ತೆಗೆದುಕೊಂಡು ಬಂದಿದ್ದಾರೆ. ನಂತರ ಅಪರಿಚಿತರು ಮಳಗಿ ಧರ್ಮಾ ಜಲಾಶಯದ ಹತ್ತಿರ ಕರೆಯಿಸಿಕೊಂಡಿದ್ದಾರೆ. ಜಲಾಶಯದ ಬಳಿಯ ಗೇಟ್ ಹಾಕಿದ ಪರಿಣಾಮ ಗೇಟ್ ಬಳಿ ಕಾರ್ ನಿಲ್ಲಿಸಿ ಹಣದ ಬ್ಯಾಗ್‌ನ್ನು ಕೈಯಲ್ಲಿ ಹಿಡಿದುಕೊಂಡು ಅಲ್ಲಿಯೆ ನಿಂತಿದ್ದಾರೆ. ಜಲಾಶಯದ ಹತ್ತಿರ ಬರದಿದ್ದಾಗ ಈ ವೇಳೆ ಇಬ್ಬರು ಅಪರಿಚಿತ ವ್ಯಕಿಗಳು ಶಿವನಗೌಡ ಅವರನ್ನು ಮಾತನಾಡಿಸುತ್ತಾ ಮುಂದೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಯೆ ಹಿಂಬದಿಯಲ್ಲಿದ್ದ ಇನ್ನೊಬ್ಬ ಅಪರಿಚಿತ ಶಿವನಗೌಡ ಕೈಯಲ್ಲಿದ್ದ ಬ್ಯಾಗ್‌ನ್ನು ಕಸಿದುಕೊಂಡು ಓಡಲು ಆರಂಭಿಸಿದ್ದಾನೆ. ಅವರನ್ನು ಶಿವನಗೌಡ ಹಾಗೂ ಅಸ್ಲಂ ಇಬ್ಬರು ಬೆನ್ನಟ್ಟಿ ಶಿವನಗೌಡ ಬ್ಯಾಗ್‌ನಲ್ಲಿ ಕೆಲವು ದಾಖಲೆ ಪತ್ರಗಳಿವೆ ಎಂದು ಕೂಗಲು ಆರಂಭಿಸಿದ್ದಾನೆ. ನಂತರ ಅಪರಿಚಿತರು ತಮ್ಮ ಚಪ್ಪಲಿಯನ್ನು ಅಲ್ಲಿಯೆ ಬಿಟ್ಟು ಕಾಗದ ಪತ್ರಗಳನ್ನು ಅಲ್ಲಿಯೆ ಬಿಸಾಕಿ ಮುಂದೆ ಗದ್ದೆಯಲ್ಲಿದ್ದ ನಾಲ್ವರು ಶಿವನಗೌಡ ಹಾಗೂ ಅಸ್ಲಾಂ ಇವರ ಮೇಲೆ ಕಲ್ಲು ಹಾಗೂ ಕಟ್ಟಿಗೆ ಎಸೆದು ಆರು ಜನರು ಪರಾರಿಯಾಗಿದ್ದಾರೆ ಎಂದು ಪೊಲೀಸರಿಗೆ ವ್ಯಾಪಾರಸ್ಥರು ತಿಳಿಸಿದ್ದಾರೆ ಎನ್ನಲಾಗಿದೆ.

ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ ವ್ಯಾಪಾರಸ್ಥರು: ಹಣ ಕಳೆದುಕೊಂಡ ಶಿವನಗೌಡ ಹಾಗೂ ಅಸ್ಲಾಂ ನಾವು ಗೋಡಂಬಿ ಬೀಜ ಖರೀದಿಸಲು ಬಂದಿದ್ದೆವು. ಆ ವೇಳೆಯಲ್ಲಿ ಡ್ಯಾಂ ನೋಡಲು ಹೋದಾಗ ಇಬ್ಬರು ಅಪರಿಚಿತರು ನಮ್ಮ ಕೈಲ್ಲಿದ್ದ ಬ್ಯಾಗ್‌ನ್ನು ಅಪಹರಿಸಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಪೊಲೀಸರು ಸಮಗ್ರ ಮಾಹಿತಿ ಸಂಗ್ರಹಿಸಿದಾಗ ಶಿವನಗೌಡ ಹಾಗೂ ಅಸ್ಲಾಂ ನಮಗೆ ಬಂಗಾರ ಕೊಡುವುದಾಗಿ ಹೇಳಿ ನಮ್ಮನ್ನು ಇಲ್ಲಿಗೆ ಕರೆಯಿಸಿಕೊಂಡು ನಮ್ಮ ಹಣ ದೋಚಿಕೊಂಡು ಹೋಗಿದ್ದಾರೆ ಎಂದು ಪೊಲೀಸರು ಎದುರು ಹೇಳುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಡಿವೈಎಸ್‌ಪಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಬದನಗೋಡ ರಸ್ತೆಗೆ ವರೆಗೂ  ಶ್ವಾನದಳ : ಕಾರವಾರದಿಂದ ಆರೋಪಿಗಳ ಪತ್ತೆಗಾಗಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಯಿಸಲಾಗಿತು. ಆರೋಪಿಗಳು ಬಿಟ್ಟು ಹೋದ ಚಪ್ಪಲಿಯ ವಾಸನೆ ಹಿಡಿದ ಬದನಗೋಡ ರಸ್ತೆಯ ಎರಡು ಕಿಮಿ ವರೆಗೂ ಹೋಗಿ ನಿಂತಿತು ಎಂದು ತಿಳಿದು ಬಂದಿದೆ.

 ಆರೋಪಿಗಳ ಪತ್ತೆಗಾಗಿ ಮುಂಡಗೋಡ ಪೊಲೀಸ್ ಹಾಗೂ ಶಿರಸಿ ಪೊಲೀಸ್ ಠಾಣೆಯಿಂದ ಮರ‍್ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಶಿರಸಿ ಡಿವೈಎಸ್‌ಪಿ ರವಿ ನಾಯ್ಕ ಹಾಗೂ ಪಿಎಸ್‌ಐಗಳಾದ ಬಸವರಾಜ ಮಬನೂರ ಹಾಗೂ ಎನ್.ಡಿ.ಜಕ್ಕಣ್ಣವರ ಹಾಗೂ ಶ್ವಾನದಳ ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.