ಕಾರವಾರ : ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಶಿವಪ್ರಕಾಶ್ ದೇವರಾಜುರನ್ನು ಎರಡು ದಿನದ ಹಿಂದೆ ವರ್ಗಾವಣೆ ಮಾಡಿ ವರ್ತಿಕಾ ಕಟಿಯಾರ್‌ರನ್ನು ಎಸ್ಪಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ವರ್ತಿಕಾ ಕಟಿಯಾರ್ ಸಹ ಬದಲಾಗಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಶಿವಪ್ರಕಾಶ್ ದೇವರಾಜು ವರ್ಗಾವಣೆ ಮಾಡಲು ಪ್ರಯತ್ನ ನಡೆಸಿ, ಈ ಹಿಂದೆ ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಕೆ.ಜಿ. ದೇವರಾಜ್‌ರನ್ನು ಅವರ ಜಾಗಕ್ಕೆ ತರಲು ಪ್ರಯತ್ನ ನಡೆಸಲಾಗಿತ್ತು. ಪ್ರಭಾವಿ ರಾಜಕಾರಣಿಯೊಬ್ಬರು ಕೆ.ಜಿ. ದೇವರಾಜ್‌ರನ್ನು ಜಿಲ್ಲೆಗೆ ಎಸ್‌ಪಿಯಾಗಿ ತರಲು ಆಸಕ್ತಿ ತೋರಿಸಿದ್ದು, ಈ ಬಗ್ಗೆ ತಮ್ಮ ಪತ್ರವನ್ನು ಸಹ ನೀಡಿದ್ದರು ಎನ್ನಲಾಗಿದೆ.
ಇದಲ್ಲದೇ ಕೆ.ಜಿ. ದೇವರಾಜ್ ಉತ್ತರ ಕನ್ನಡ ಜಿಲ್ಲೆಗೆ ಬರಲು ಇನ್ನೋರ್ವ ಹಿರಿಯ ರಾಜಕಾರಣಿ ಸಹ ಹಸಿರು ನಿಶಾನೆ ತೋರಿದ್ದು, ಗೃಹ ಸಚಿವರು ಇದಕ್ಕೆ ಸಮ್ಮತಿ ಕೊಟ್ಟಿದ್ದರು ಎನ್ನಲಾಗಿದೆ. ಇದರ ನಡುವೆ ಆಶ್ಚರ್ಯಕರ ಬೆಳವಣಿಗೆ ಎನ್ನುವಂತೆ ಕೆ.ಜಿ. ದೇವರಾಜ್ ಬದಲು ವರ್ತಿಕಾ ಕಟಿಯಾರ್‌ರನ್ನು ಜಿಲ್ಲೆಗೆ ರಾಜ್ಯ ಸರ್ಕಾರ ವರ್ಗಾಯಿಸಿ ಆದೇಶ ಹೊರಡಿಸಿತ್ತು.
ವರ್ತಿಕಾ ಕಟಿಯಾರ್ ವರ್ಗಾವಣೆ ಮಾಡಿ ಜುಲೈ 14ರಂದು ಆದೇಶ ಹೊರಡಿಸಿದ್ದು, 15ರಂದು ಅವರು ಜಿಲ್ಲೆಗೆ ಬಂದು ಅಧಿಕಾರ ಸ್ವೀಕರಿಸಬಹುದು ಎನ್ನಲಾಗಿತ್ತು. ಸಾಮಾನ್ಯವಾಗಿ ಐಪಿಎಸ್ ಅಧಿಕಾರಿಗಳು ವರ್ಗಾವಣೆಯಾದ ನಂತರ ಮಾರನೇ ದಿನವೇ ತೆರಳಿ ತಮ್ಮ ಅಧಿಕಾರ ಸ್ವೀಕರಿಸುವುದು ಎಲ್ಲೆಡೆ ನಡೆಯುತ್ತದೆ. ಆದರೆ ವರ್ತಿಕಾ ಕಟಿಯಾರ್ ವರ್ಗಾವಣೆಯಾಗಿ ಎರಡು ದಿನವಾದರೂ ಇನ್ನೂ ಮೂಮೆಂಟ್ ಆರ್ಡರ್ ಅವರಿಗೆ ಸಿಕ್ಕಿಲ್ಲ ಎನ್ನಲಾಗಿದೆ.
ಇನ್ನೊಂದೆಡೆ ಜಿಲ್ಲೆಗೆ ಬರುವ ವರ್ತಿಕಾ ಕಟಿಯಾರ್ ಸಹ ಇನ್ನೂ ಆಸಕ್ತಿ ತೊರಿಸಿಲ್ಲ ಎನ್ನಲಾಗಿದ್ದು, ಇದರ ನಡುವೆ ತಾನು ಪತ್ರವನ್ನು ನೀಡಿದ್ದ ಕೆ.ಜಿ. ದೇವರಾಜ್‌ರನ್ನು ಜಿಲ್ಲೆಗೆ ವರ್ಗಾಯಿಸುವಂತೆ ಉತ್ತರ ಕನ್ನಡ ಜಿಲ್ಲೆಯ ಪ್ರಭಾವಿ ರಾಜಕಾರಣಿ ಸಿಎಂ ಬಳಿ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಬೆಂಗಳೂರು ಮಟ್ಟದಲ್ಲಿ ಈ ಬಗ್ಗೆ ಸಾಕಷ್ಟು ಬೆಳವಣಿಗೆಯಾಗಿದ್ದು, ಇನ್ನು ಒಂದೆರಡು ದಿನದಲ್ಲಿ ಈ ಬಗ್ಗೆ ಸ್ಪಷ್ಟ ಸಂದೇಶ ಹೊರಬೀಳಲಿದೆ.
ಇಂದು ಸಿಎಂ ನಿರ್ಧಾರ
ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಸಭೆ ಹಿನ್ನೆಲೆಯಲ್ಲಿ ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ತೆರಳಿದ್ದು, ಇಂದು ವಾಪಾಸ್ ಆಗಲಿದ್ದಾರೆ.
ಸಿಎಂ ಯಡಿಯೂರಪ್ಪ ಬೆಂಗಳೂರಿಗೆ ಬಂದ ನಂತರ ಎಸ್‌ಪಿ ಬದಲಾವಣೆ ಮಾಡುವರೋ ಅಥವಾ ವರ್ತಿಕಾ ಕಟಿಯಾರ್‌ರಿಗೆ ಜಿಲ್ಲೆಗೆ ತೆರಳಲು ಮೂಮೆಂಟ್ ಆರ್ಡರ್ ಕೊಡುತ್ತಾರೆಯೋ ಎನ್ನುವುದು ನಿರ್ಧಾರವಾಗಲಿದೆ.