ಮುಂಡಗೋಡ : ೨೦ ಲಕ್ಷ ಕೋಟಿ ಪಿಎಂ ಕೇರ್ ಹಣದಲ್ಲಿ ೨೦ ಸಾವಿರ ಕೋಟಿ ಹಣವನ್ನೂ ಲಸಿಕೆಗೆ ಖರ್ಚು ಮಾಡಿಲ್ಲ ಈ ಸರ್ಕಾರ. ಮಾನವೀಯತೆ ಇಲ್ಲದವರು ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಮಂತ್ರಿಗಳಾಗಿದ್ದಾರೆ. ಎರಡೂ ಸರ್ಕಾರಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಕೋವಿಡ್ ವಿಷಯದಲ್ಲಿ ನಿಜವನ್ನು ಹೇಳುವಲ್ಲಿ ವಿಫಲವಾಗಿದೆ. ಕೊರೊನಾ ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಬರೀ ಪೊಳ್ಳು ಭರವಸೆಗಳ ಮೂಲಕ ಜನರ ದಾರಿತಪ್ಪಿಸುತ್ತಿದೆ. ಹಾಗಾಗಿಯೇ ಕೊರೊನಾ ನಿರ್ವಹಣೆ ಪ್ರಕರಣಗಳಲ್ಲಿ ಸರ್ಕಾರದ ಉದಾಸೀನತೆಗೆ ಸುಪ್ರೀಂ ಕೋರ್ಟ್ ಕಪಾಳ ಮೋಕ್ಷ ನೀಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ ಹೇಳಿದರು.
ಶನಿವಾರ ಅವರು ಲೊಯೋಲಾ ವಿಕಾಸ ಕೇಂದ್ರದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಹಾಯಹಸ್ತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಾಣಿಗಳು ಸತ್ತಾಗ ಗೌರವಯುತವಾಗಿ ಅಂತ್ಯಕ್ರಿಯೆ ಮಾಡಿಸುತ್ತೇವೆ. ಆದರೆ ಕೊರೊನಾ ಸಂದರ್ಭದಲ್ಲಿ ಮನುಷ್ಯರು ಸತ್ತಾಗ ಅಂತ್ಯಕ್ರಿಯೆ ಮಾಡಲು ಸ್ಥಳಾವಕಾಶವಿಲ್ಲದೇ ೨-೩ ದಿನಗಳವರೆಗೆ ಕಾಯ್ದು ಅಂತ್ಯಕ್ರಿಯೆ ಮಾಡಿದ ಪರಿಸ್ಥಿತಿ ಈ ರಾಜ್ಯ ಸರ್ಕಾರದಲ್ಲಿ ಕಂಡಿದ್ದೇವೆ ಎಂದು ಅವರು ಹೇಳಿದರು.
ಕೊರೊನಾ ಸಂದರ್ಭದಲ್ಲಿ ಎಷ್ಟೋ ಜನರು ತಮ್ಮ ಸಂಬಂಧಿಕರನ್ನು ಕಳೆದುಕೊಂಡಿದ್ದಾರೆ. ಎಷ್ಟೋ ಜನ ಮಕ್ಕಳು ಅನಾಥರಾಗಿದ್ದಾರೆ. ಇಂತಹ ಕೋವಿಡ್ ಸಮಯದಲ್ಲೂ ಸುಳ್ಳುಗಾರ ಮೋದಿ ನಮಸ್ತೆ ಟ್ರಂಪ ಕಾರ್ಯಕ್ರಮ ಮಾಡಿ ವಿಶ್ವಗುರು ಆಗಲು ಹೊರಟಿದ್ದಾರೆ. ಸುಳ್ಳು ಹೇಳೊದರಲ್ಲಿ ಮೋದಿ ವಿಶ್ವಗುರು ಆಗಿದ್ದಾರೆ ಎಂದರು.
ಕೆ.ಪಿ.ಸಿ.ಸಿ ಸದಸ್ಯ ಪ್ರಶಾಂತ ದೇಶಪಾಂಡೆ ಮಾತನಾಡಿ, ಕೊವೀಡ್ ಸಂಕಷ್ಟ ಸಮಯದಲ್ಲಿ ಕಿರಾಣಿ ಮತ್ತು ವರ್ತಕರಿಂದ ತಾಲೂಕಿನ ಟಿ.ಎಚ್. ಓ. ಮತ್ತು ಡಿ.ಎಚ್. ಓ. ರವರು ಹಣ ಸಂಗ್ರಹ ಮಾಡಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಮತ್ತು ಮೆಡಿಸಿನ್ ತರಲು ಬಳಸಿಕೊಂಡಿದ್ದು ಇದು ಸರಕಾರ ದಿವಾಳಿತನಕ್ಕೆ ಹಿಡಿದ ಕನ್ನಡಿ ಆಗಿದೆ. ಕೋವಿಡ್ ಬಂದು ಒಂದೂವರೆ ವರ್ಷವಾದರೂ ಇನ್ನೂ ಸಹ ಸಮರ್ಪಕವಾದ ಆಕ್ಸಿಜನ್, ಬೆಡ್, ವೆಂಟಿಲೇಟರ್ ಪೂರೈಸಲು ಈ ಸರ್ಕಾರಕ್ಕೆ ಆಗುತ್ತಿಲ್ಲ. ಸರ್ಕಾರ ಮಾಡಲಾಗದ ಕೆಲಸವನ್ನು ನಮ್ಮ ಪಕ್ಷ ಮಾಡುತ್ತಿದೆ ಎಂದರು.
ಜಿಲ್ಲಾ ಕಾಂಗ್ರೆಸ ಅಧ್ಯಕ್ಷ ಬೀಮಣ್ಣ ನಾಯ್ಕ ಮಾತನಾಡಿದರು. ಬ್ಲಾಕ ಕಾಂಗ್ರೆಸ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ಹಾಗೂ ಜಿಲ್ಲಾ ಕಾರ್ಯದರ್ಶಿ ಹೆಚ್.ಎಮ್.ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ನಾಗರಾಜ ನಾರ್ವೇಕರ, ಕಾಂಗ್ರೆಸ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯ್ಕ, ಮಹಿಳಾ ಜಿಲ್ಲಾ ಕಾಂಗ್ರೆಸ ಅಧ್ಯಕ್ಷೆ ಸುಜಾತಾ ಗಾಂವಕರ, ಅಲ್ಪಸಂಖ್ಯಾತ ಮುಖಂಡ ಎನ್.ಎಮ್.ದುಂಡಸಿ, ಪ.ಪಂ. ಸದಸ್ಯರುಗಳಾದ ಎಮ್.ಎಮ್.ಮಕಾನದಾರ, ಮಹ್ಮದಜಾಫರ ಹಂಡಿ, ಧರ್ಮರಾಜ ನಡಿಗೇರಿ ಸೇರಿದಂತೆ ಮುಂತಾದವರು ಹಾಜರಿದ್ದರು.