ಮುಂಡಗೋಡ : ಆಹಾರ ಅರಸುತ್ತಾ ಬಂದ ಜಿಂಕೆಯೊಂದು ಗದ್ದೆಯ ಬೇಲಿಗೆ ಹಾಕಿದ್ದ ಬಲೆಯಲ್ಲಿ ಸಿಲುಕಿಕೊಂಡಿದ್ದನ್ನು ಅರಣ್ಯ ಇಲಾಖೆಯವರು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟ ಘಟನೆ ತಾಲೂಕಿನ ಅಜ್ಜಳ್ಳಿ ಗ್ರಾಮದ ಬಳಿ ಜರುಗಿದೆ.
ಅಜ್ಜಳ್ಳಿ ಗ್ರಾಮದ ಹೊರವಲಯದಲ್ಲಿ ಗೋವಿನಜೋಳದ ಹೊಲದಲ್ಲಿ ಆಹಾರ ಅರಸಿ ಬಂದ ಜಿಂಕೆಯೊಂದು ಗದ್ದೆಯ ಬೇಲಿಗೆ ಹಾಕಿದ್ದ ಬಲೆಯಲ್ಲಿ ಸಿಲುಕಿಕೊಂಡಿತು. ಬಲೆಯಲ್ಲಿ ಸಿಲುಕಿಕೊಂಡ ಜಿಂಕೆಯು ತನ್ನ ಕೋಡನ್ನು ಬಲೆಯಿಂದ ತೆಗೆಯಲಾಗದೇ ಪರದಾಡಿದೆ.
ಈ ವೇಳೆ ಜಿಂಕೆಯ ಕೂಗಾಟ ಕೇಳಿದ ರೈತರು ಬಂದು ನೋಡಿದಾಗ ಬಲೆಯಲ್ಲಿ ಜಿಂಕೆಯ ಕೋಡು ಬಲೆಯಲ್ಲಿ ಸಿಕ್ಕಿ ಹಾಕಿರುವುದನ್ನು ಕಂಡು ತಕ್ಷಣವೇ ಅರಣ್ಯ ಇಲಾಖೆಯಯವರಿಗೆ ಮಾಹಿತಿ ನೀಡಿದ್ದಾರೆ.
ಅರಣ್ಯ ರಕ್ಷಕರು ಹಾಗೂ ಹಾವು ಹಿಡಿಯುವುದರಲ್ಲಿ ನಿಷ್ಣಾತರಾದ ಶ್ರೀಧರ ಭಜಂತ್ರಿ ಹಾಗೂ ತಂಡದವರು ಸ್ಥಳಕ್ಕಾಗಮಿಸಿ ಬೇಲಿಗೆ ಹಾಕಿದ್ದ ಬಲೆಯಲ್ಲಿ ಸಿಲುಕಿಕೊಂಡಿದ್ದ ಜಿಂಕೆಯ ಕೋಡನ್ನು ಬಿಡಿಸಿ ತೆಗೆದು ಜಿಂಕೆಯನ್ನು ಕಾಡಿಗೆ ಬಿಟ್ಟಿದ್ದಾರೆ. ಕೋಡನ್ನು ಬಲೆಯಿಂದ ಬಿಡಿಸುತ್ತಿದ್ದಂತೆ ಜಿಂಕೆಯು ಕಾಡಿನತ್ತ ಜೋರಾಗಿ ಓಡಿ ಹೋಯಿತು ಎಂದು ಅರಣ್ಯ ಇಲಾಖೆಯ ಸಿಬ್ಬಂದಿಗಳು ತಿಳಿಸಿದರು.