ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರ ಪತ್ನಿ ಮಂಜುಳಾ ಇಡಿ ವಶಕ್ಕೆ

Spread the love

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಬಿ ನಾಗೇಂದ್ರ ಪತ್ನಿ ಮಂಜುಳಾರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬುಧವಾರ ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಹಗರಣದ ಆರೋಪಿಗಳ ಹೇಳಿಕೆ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ವಶಕ್ಕೆ ಪಡೆದ ನಂತರ ಅವರನ್ನು ಅಧಿಕಾರಿಗಳು ಶಾಂತಿನಗರದಲ್ಲಿರುವ ಇಡಿ ಕಚೇರಿಗೆ ಕರೆದೊಯ್ದಿದ್ದಾರೆ.
ವಾಲ್ಮೀಕಿ ನಿಗಮ ಹಗರಣದಲ್ಲಿ ನಾಗೇಂದ್ರ ಪತ್ನಿ ಮಂಜುಳಾರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆಯುತ್ತಿದ್ದಂತೆಯೇ ಹಲವು ಪ್ರಶ್ನೆಗಳು, ಅನುಮಾನಗಳೂ ಹುಟ್ಟಿಕೊಂಡಿವೆ. 187 ಕೋಟಿ ಹಗರಣದಲ್ಲಿ ಮಾಜಿ ಸಚಿವರ ಪತ್ನಿಯ ಪಾತ್ರವೇನು? ಆರೋಪಿಗಳು ವಿಚಾರಣೆ ವೇಳೆ ಮಂಜುಳಾ ಹೆಸರು ಹೇಳಿದ್ದಾರಾ? ಆರೋಪಿಗಳಿಂದ ಮಂಜುಳಾ ಅವರು ನಾಗೇಂದ್ರ ಪರ ಹಣ ಪಡೆದಿದ್ದಾರಾ? ಮಂಜುಳಾಗೆ ಈ ಅಕ್ರಮದ ಬಗ್ಗೆ ಮಾಹಿತಿ ಇತ್ತೇ? 5 ದಿನದ ನಾಗೇಂದ್ರ ವಿಚಾರಣೆ ವೇಳೆ ಮಂಜುಳಾ ವಿರುದ್ಧ ಸಾಕ್ಷಿಗಳು ಸಿಕ್ಕಿವೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಇದೀಗ ಇಡಿ ನಡೆ ಬಗ್ಗೆ ಕುತೂಹಲ ಗರಿಗೆದರಿದೆ.
ಈ ಮಧ್ಯೆ, ಪ್ರಕರಣದ ತನಿಖೆ ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು, ಹೈದರಾಬಾದ್ ಮೂಲದ ಖಾಸಗಿ ಬ್ಯಾಂಕಿನಿಂದ ಬಳ್ಳಾರಿ ಜಿಲ್ಲೆಯ ಸುಮಾರು 20ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಲಕ್ಷಾಂತರ ರೂಪಾಯಿ ಹಣ ವರ್ಗಾವಣೆ ಆಗಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಎಂದು ವರದಿಯಾಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಮಂಗಳವಾರ ಕರ್ನಾಟಕ ವಿಧಾನಸಭೆ ಕಲಾಪದಲ್ಲಿಯೂ ಭಾರಿ ಚರ್ಚೆಗೆ ಗ್ರಾಸವಾಯಿತು. ಇದೀಗ ನಾಗೇಂದ್ರ ಪತ್ನಿಯನ್ನೂ ಇಡಿ ವಶಕ್ಕೆ ಪಡೆದಿರುವುದರಿಂದ ಪ್ರತಿಪಕ್ಷಗಳಿಗೆ ಪ್ರಬಲ ಅಸ್ತ್ರ ದೊರೆತಂತಾಗಲಿದೆ. ಗುರುವಾರವೂ ಕಲಾಪದಲ್ಲಿ ಈ ವಿಚಾರ ಹೆಚ್ಚಿನ ಗದ್ದಲಕ್ಕೆ ಕಾರಣವಾಗುವ ಸಾಧ್ಯತೆ ಇದೆ.