![](https://rajnewsline.com/wp-content/uploads/2024/07/cropped-img_20240708_1554575338004754261616865.jpg)
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರವು ಟೆಂಡರ್ ಇಲ್ಲದೆ 400 ಕೋಟಿ ಕಾಮಗಾರಿ ಮಾಡಿದೆ ಎಂದು ರಾಜ್ಯ ಬಿಜೆಪಿ ಮತ್ತೊಂದು ಗಂಭೀರ ಆರೋಪ ಮಾಡಿದೆ.
ಈ ಕುರಿತು ಪೋಸ್ಟ್ ಮಾಡಿರುವ ಬಿಜೆಪಿ, ಟೆಂಡರ್ ಇಲ್ಲದೆ ʼಕೈʼಗೊಂಡ 400 ಕೋಟಿ ಕಾಮಗಾರಿ, ಕಾಂಗ್ರೆಸ್ ಸರ್ಕಾರದ ಅದಕ್ಷ ಆಡಳಿತದಲ್ಲಿ ಪ್ರತಿ ಇಲಾಖೆಯಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕರ್ನಾಟಕ ರಾಜ್ಯ ರಾಜೀವ್ ಗಾಂಧಿ ವಸತಿನಿಗಮದ ಅಧೀನದಲ್ಲಿರುವ ಹ್ಯಾಬಿಟೇಟ್ ಕೇಂದ್ರವು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ವಸತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಂದ ₹400 ಕೋಟಿಗೂ ಅಧಿಕ ಮೊತ್ತ ಪಡೆದು, ಟೆಂಡರ್‌ಗಳನ್ನು ಕರೆಯದೆ ಕಾಮಗಾರಿಗಳನ್ನು ಅನುಷ್ಠಾನ ಮಾಡಿದೆ. ಇದು ಕೆಟಿಪಿಪಿ ಕಾಯ್ದೆ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದೆ.
ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರೇ, ನಿಮ್ಮದೇ ಅಧೀನದಲ್ಲಿರುವ ಇಲಾಖೆಯಲ್ಲಿ ನಡೆದಿರುವ ಈ ಹಗರಣಗಳ ಬಗ್ಗೆ ಮೌನವೇಕೆ? ಇದರಲ್ಲಿ ಯಾರ ʼಕೈʼವಾಡವಿದೆ. ಯಾರ ಕೈಗೆಷ್ಟು ಹೋಗಿದೆ? ಇದರಲ್ಲಿಯೂ ಕೇವಲ ಅಧಿಕಾರಿಗಳ ತಲೆಗೆ ಕಟ್ಟಿ ದೊಡ್ಡ ಕೈಗಳು ತಪ್ಪಿಸಿಕೊಳ್ಳುವ ಕಾರ್ಯ ನಡೆಸಬೇಡಿ. ಈ ಕೂಡಲೇ ತನಿಖೆ ನಡೆಸಿ ಭ್ರಷ್ಟರ ಜೇಬು ಸೇರಿರುವ ನಾಡಿನ ಜನರ ತೆರಿಗೆ ಹಣವನ್ನು ಮರಳಿಸಿ ಎಂದು ಅಗ್ರಹಿಸಿದೆ.