
ಬೆಳಗಾವಿ : ಮೂಲಸೌಕರ್ಯ ಕೊರತೆ ಹಿನ್ನೆಲೆಯಲ್ಲಿ ರಾಜ್ಯದ 6 ಎಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಆದೇಶಿಸಿದೆ.
ಇತ್ತೀಚೆಗೆ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕಾಲೇಜುಗಳನ್ನು ಮುಚ್ಚುವ ಆದೇಶವು ಅನ್ವಯಿಸುತ್ತದೆ ಎಂದು ವಿಶ್ವವಿದ್ಯಾಲಯವು ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದೆ.
2021-22ರ ಶೈಕ್ಷಣಿಕ ವರ್ಷದಿಂದ ಈ ಕಾಲೇಜುಗಳಿಗೆ ಪ್ರವೇಶ ಪಡೆಯದಂತೆ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಎಚ್ಚರಿಕೆಯನ್ನೂ ವಿಶ್ವವಿದ್ಯಾಲಯ ನೀಡಿದೆ.
‘ಮೂಲಸೌಕರ್ಯಗಳ ಕೊರತೆ, ಸೀಟುಗಳನ್ನು ತುಂಬುವಲ್ಲಿ ತೊಂದರೆ, ಕಳಪೆ ಗುಣಮಟ್ಟದ ಬೋಧನೆಯ ಹಿನ್ನೆಲೆಯಲ್ಲಿ ಈ ಕಾಲೇಜುಗಳನ್ನು ಮುಚ್ಚಲು ಆದೇಶಿಸಲಾಗಿದೆ’ ಎಂದು ವಿಟಿಯುನ ಹಿರಿಯ ಅಧಿಕಾರಿಯೊಬ್ಬರು ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿದ್ದಾರೆ.
ಈ ಆರು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಬೇರೆ ಕಾಲೇಜುಗಳಿಗೆ ವರ್ಗಾಯಿಸಲಾಗುವುದು ಎಂದು ವಿಟಿಯು ಹೇಳಿದೆ.
ಆರು ಕಾಲೇಜುಗಳ ಪಟ್ಟಿ ಇಲ್ಲಿದೆ
* ಬೆಂಗಳೂರಿನ ಆಲ್ಫಾ ಎಂಜಿನಿಯರಿಂಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
* ಬೆಳಗಾವಿಯ ಶೇಖ್ ಎಂಜಿನಿಯರಿಂಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
* ಬೆಂಗಳೂರಿನ ಇಸ್ಲಾಮಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
* ಚಾಮರಾಜನಗರದ ಏಕಲವ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ,
* ಕೆಜಿಎಫ್‌ನ ಶ್ರೀ ವಿನಾಯಕ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
* ಬೆಂಗಳೂರಿನ ಬಿಟಿಎಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ