Headlines

ಭಾರತ ಸಂಪೂರ್ಣ ಹುರುಪಿನಿಂದ ಕೊರೊನಾ ವಿರುದ್ಧ ಹೋರಾಡುತ್ತಿದೆ; ಮೋದಿ ಶ್ಲಾಘನೆ

Spread the love

ನವದೆಹಲಿ : ಭಾರತದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಡಿಎನ್‌ಎ ಆಧಾರಿತ ಕೊರೊನಾ ಲಸಿಕೆ ಝೈಕೋವ್ ಡಿ ತುರ್ತು ಬಳಕೆಗೆ ಶುಕ್ರವಾರ ಭಾರತೀಯ ಔಷಧ ನಿಯಂತ್ರಕ ಅನುಮೋದನೆ ನೀಡಿದ್ದು, ಪ್ರಧಾನಿ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಲಸಿಕೆ ಅಭಿವೃದ್ಧಿಪಡಿಸಿದ ವಿಜ್ಞಾನಿಗಳ ಶ್ರಮವನ್ನು ಮೋದಿ ಶ್ಲಾಘಿಸಿದ್ದು, ಮೊದಲ ಡಿಎನ್‌ಎ ಆಧಾರಿತ ಝೈಕೋವ್ ಡಿ ಲಸಿಕೆ ಭಾರತದ ವಿಜ್ಞಾನಿಗಳ ಉತ್ಸಾಹಕ್ಕೆ ಸಾಕ್ಷಿಯಾಗಿದೆ. ಇದೊಂದು ಮಹತ್ವದ ಸಾಧನೆ ಎಂದು ಟ್ವೀಟ್ ಮಾಡಿದ್ದಾರೆ.

‘ಭಾರತ ಸಂಪೂರ್ಣ ಹುರುಪಿನಿಂದ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದೆ’ ಎಂದು ಲಸಿಕೆಗೆ ಅನುಮೋದನೆ ಬೆನ್ನಲ್ಲೇ ಟ್ವೀಟ್ ಮಾಡಿದ್ದಾರೆ. ಇದು ನಿಜಕ್ಕೂ ಮಹತ್ವದ ಸಾಧನೆ ಎಂದು ಹೊಗಳಿದ್ದಾರೆ.

ಅಹಮದಾಬಾದ್ ಮೂಲದ ಔಷಧ ಉತ್ಪಾದನಾ ಸಂಸ್ಥೆ ಝೈಡಸ್ ಕ್ಯಾಡಿಲಾ ತನ್ನ ಝೈಕೋವ್-ಡಿ ಲಸಿಕೆಗೆ ಶುಕ್ರವಾರ ಭಾರತೀಯ ಔಷಧ ನಿಯಂತ್ರಕದಿಂದ ತುರ್ತು ಬಳಕೆಗೆ ಅನುಮೋದನೆ ಪಡೆದುಕೊಂಡಿತು. ದೇಶದಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳು ಮತ್ತು ವಯಸ್ಕರಿಗೆ ಈ ಲಸಿಕೆ ನೀಡಲು ಅನುಮತಿ ನೀಡಲಾಗಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

ಝೈಡಸ್ ಕ್ಯಾಡಿಲಾ ಹೆಲ್ತ್ ಕೇರ್ ಲಿಮಿಟೆಡ್ ಕಂಪನಿ ಉತ್ಪಾದಿಸುವ ಕೊರೊನಾ ಸೋಂಕಿನ ಝೈಕೋವ್-ಡಿ ಲಸಿಕೆ ಸೋಂಕಿನ ವಿರುದ್ಧ ಶೇ.66.60ರಷ್ಟು ಪರಿಣಾಮಕಾರಿಯಾಗಿದ್ದು, ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವಂತೆ ಕೋರಿ ಕಳೆದ ಜುಲೈ 1ರಂದೇ ಅರ್ಜಿಯನ್ನು ಸಲ್ಲಿಸಲಾಗಿತ್ತು.

ಜೈವಿಕ ತಂತ್ರಜ್ಞಾನ ವಿಭಾಗ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಂಶೋಧಿಸಿರುವ ಝೈಡಸ್ ಕ್ಯಾಡಿಲಾ ಕಂಪನಿ ಉತ್ಪಾದಿಸುವ ಝೈಕೋವ್-ಡಿ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದ ಎರಡು ತಿಂಗಳಿನಲ್ಲಿ ಲಸಿಕೆ ಬಿಡುಗಡೆಗೊಳಿಸಲಾಗುತ್ತದೆ ಎಂದು ಕಂಪನಿ ಮಾಹಿತಿ ನೀಡಿದೆ. ಜೈವಿಕ ತಂತ್ರಜ್ಞಾನ ಇಲಾಖೆಯ ಪಾಲುದಾರಿಕೆಯಲ್ಲಿ ಲಸಿಕೆ ತಯಾರಾಗುತ್ತಿದೆ.

ZyCov-D ಒಂದು “ಪ್ಲಾಸ್ಮಿಡ್ ಡಿಎನ್‌ಎ” ಲಸಿಕೆ ಪ್ಲಾಸ್ಮಿಡ್ ಡಿಎನ್‌ಎ ಅಣುವಿನಿಂದ ಅಭಿವೃದ್ಧಿಗೊಳಿಸಲಾಗಿದೆ.

ಸೂಜಿರಹಿತ ಲಸಿಕೆಯಾಗಿರುವ ಝೈಕೋವ್ ಡಿ ಲಸಿಕೆಯ ಮೂರು ಡೋಸ್ ಪ್ರಮಾಣದ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವಂತೆ ಕೇಂದ್ರ ಆರೋಗ್ಯ ತಜ್ಞರು ಶಿಫಾರಸು ಮಾಡಿದ್ದು, ಶುಕ್ರವಾರ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ನೇರವಾಗಿ ಸೂಜಿ ಮೂಲಕ ಚುಚ್ಚುವ ಲಸಿಕೆ ಇದಾಗದೇ ಜೆಟ್ ಇಂಜೆಕ್ಟರ್ ಬಳಸಿ ಚರ್ಮದ ಕೋಶಗಳಿಗೆ ಚುಚ್ಚುವ ಔಷಧ ಇದಾಗಿರುವುದು ವಿಶೇಷವೆನಿಸಿದೆ.

ಝೈಕೋವ್ ಡಿ ಕೊರೊನಾ ಲಸಿಕೆ ಡೆಲ್ಟಾ ಪ್ರಭೇದದ ವಿರುದ್ಧವೂ ಪರಿಣಾಮಕಾರಿ ಎನ್ನಲಾಗಿದ್ದು, 12ರಿಂದ18 ವರ್ಷದವರ ಮೇಲೆ ಲಸಿಕೆ ಪ್ರಯೋಗ ಯಶಸ್ವಿಯಾಗಿದೆ ಎಂದು ತಯಾರಿಕಾ ಸಂಸ್ಥೆ ಹೇಳಿದೆ. ಝೈಡಸ್‌ ಕ್ಯಾಡಿಲಾ ವರ್ಷಕ್ಕೆ 120 ಮಿಲಿಯನ್ ಡೋಸ್‌ಗಳನ್ನು ತಯಾರಿಸಲು ಹೊಸ ಸೌಲಭ್ಯವನ್ನು ಸ್ಥಾಪಿಸುತ್ತಿದೆ. ಇದರರ್ಥ ಒಂದು ವರ್ಷದಲ್ಲಿ 40 ಮಿಲಿಯನ್‌ ಜನರಿಗೆ ZyCov-D ಜನರಿಗೆ ನೀಡಬಹುದು.

ಭಾರತ ಸರ್ಕಾರವು ಕೊರೊನಾ ಸೋಂಕಿನ ವಿರುದ್ಧ ಹೋರಾಟಕ್ಕೆ ಆರು ಲಸಿಕೆಗಳನ್ನು ಅಧಿಕೃತಗೊಳಿಸಿದೆ. ಕೋವ್ಯಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್, ಮಾಡೆರ್ನಾ ಹಾಗೂ ಜಾನ್ಸನ್ ಆಂಡ್ ಜಾನ್ಸನ್‌ನ ಒಂದೇ ಡೋಸ್ ಲಸಿಕೆ. ಇದೀಗ ಝೈಕೋವ್ ಡಿ ಲಸಿಕೆ ಸೇರ್ಪಡೆಯಾಗಿದೆ. ಭಾರತದಲ್ಲಿ ಝೈಡಸ್ ಕ್ಯಾಡಿಲಾ ಕಂಪನಿ ಸಂಶೋಧಿಸಿರುವ ಝೈಕೋವ್-ಡಿ ಲಸಿಕೆಯ ಸುರಕ್ಷತೆ ಮತ್ತು ಪರಿಣಾಮವನ್ನು ಪರೀಕ್ಷಿಸುವ ನಿಟ್ಟಿನಲ್ಲಿ ವೈದ್ಯಕೀಯ ಪ್ರಯೋಗಗಳನ್ನು ನಡೆಸಲಾಗಿತ್ತು. ದೇಶಾದ್ಯಂತ 28,000 ಜನರನ್ನು ಬಳಸಿಕೊಂಡು ವೈದ್ಯಕೀಯ ಪ್ರಯೋಗ ನಡೆಸಲಾಗಿದೆ. 12 ರಿಂದ 18 ವರ್ಷದ 1,000 ಮಕ್ಕಳನ್ನು ಲಸಿಕೆ ಪರೀಕ್ಷೆಯಲ್ಲಿ ಬಳಸಿಕೊಳ್ಳಲಾಗಿದ್ದು, ಝೈಕೋವ್-ಡಿ ಲಸಿಕೆಯು ಹೆಚ್ಚು ಸುರಕ್ಷಿತ ಹಾಗೂ ಪರಿಣಾಮಕಾರಿ ಎಂಬುದು ತಿಳಿದುಬಂದಿದೆ.

ಕೊರೊನಾ ಎರಡನೇ ಅಲೆ ಸಂದರ್ಭ ದೇಶಾದ್ಯಂತ 50 ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಿದ್ದು, ಇದು ಕೊರೊನಾ ವೈರಸ್‌ ರೂಪಾಂತರ ಡೆಲ್ಟಾ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.