
ಕಾಬೂಲ್: ತಾಲಿಬಾನಿಗಳು ಸಂತೋಷ ತಡೆಯಲಾರದೆ ಗಾಳಿಯಲ್ಲಿ ಗುಂಡು ಹಾರಿಸಿದ ಪರಿಣಾಮ ಹಲವು ಮಕ್ಕಳು ಸೇರಿದಂತೆ 17 ಮಂದಿ ಸಾವನ್ನಪ್ಪಿದ್ದು, 41 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ಸುದ್ದಿ ಸಂಸ್ಥೆಯೊಂದು ತಿಳಿಸಿದೆ.
ಈವರೆಗೆ ಪಾಳುಭೂಮಿಯಾಗಿ ಮಾರ್ಪಟ್ಟಿದ್ದ ಪಂಜ್‌ಶಿರ್ ಕಣಿವೆಯನ್ನು ವಶಪಡಿಸಿಕೊಂಡ ಸಂಭ್ರಮಾಚರಣೆ ಹಾಗೂ ನ್ಯಾಷನಲ್ ರೆಸಿಸ್ಟೆನ್ಸ್ ಫೋರ್ಸ್ ಆಫ್ ಅಫ್ಘಾನಿಸ್ತಾನ(ಎನ್ ಆರ್ ಎಫ್ ಎ) ಸೋಲು ಅನುಭವಿಸಿದನ್ನು ಸಂಭ್ರಮಿಸಿಕೊಂಡ ತಾಲಿಬಾನ್ ಗಳು, ನಿನ್ನೆ ರಾತ್ರಿ ಸಂತೋಷದಿಂದ ಗಾಳಿಯಲ್ಲಿ ಗುಂಡು ಹಾರಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಹಾಗೂ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಗುಂಡಿನ ದಾಳಿಯಲ್ಲಿ ಗಾಯಗೊಂಡ ತಮ್ಮವರನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ಕರೆದೊಯ್ಯುವ ವೀಡಿಯೊಗಳನ್ನು ಒಳಗೊಂಡಿದೆ.
“ದೇವರ ದಯೆಯಿಂದ ಇಡೀ ಅಫ್ಘಾನಿಸ್ತಾನವನ್ನು ನಮ್ಮ ನಿಯಂತ್ರಣಕ್ಕೆ ತಂದುಕೊಂಡಿದ್ದೇವೆ. ಪಂಜಶೀರ್ ಈಗ ನಮ್ಮ ನಿಯಂತ್ರಣದಲ್ಲಿದೆ “ಎಂದು ತಾಲಿಬಾನ್ ಕಮಾಂಡರ್ ಹೇಳಿದ್ದಾರೆ. ಆದರೆ ಈ ಸಂತೋಷಕ್ಕಾಗಿ ತಾಲಿಬಾನಿಗಳು ನಡೆಸಿದ ಗುಂಡಿನ ದಾಳಿಯ ನಂತರ 41 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, 17 ಜನರು ಸಾವನ್ನಪ್ಪಿದ್ದಾರೆ ಹಲವರು ಗಾಯಗೊಂಡಿದ್ದಾರೆ ಎಂದು ಕಾಬೂಲ್‌ನ ತುರ್ತು ಆಸ್ಪತ್ರೆ ಹೇಳಿದೆ. ಅವರೆಲ್ಲರೂ ನಂಗರ್‌ಹಾರ್ ಪ್ರಾಂತ್ಯದವರು.
ಪಂಜಶೀರ್ ಅನ್ನು ತಾಲಿಬಾನ್ ವಶಪಡಿಸಿಕೊಂಡಿದೆ ಎಂಬ ವರದಿಗಳನ್ನು ತಾಲಿಬಾನ್ ವಿರೋಧಿ ನಾಯಕ ಅಹ್ಮದ್ ಮಸೂದ್ ನಿರಾಕರಿಸಿದ್ದಾರೆ. ಇದೆಲ್ಲವೂ ಸುಳ್ಳು ಪ್ರಚಾರ, ಪಾಕಿಸ್ತಾನದ ಮಾಧ್ಯಮಗಳು ಹರಡುತ್ತಿರುವ ಸುಳ್ಳು ಸುದ್ದಿ ಎಂದು ಅವರು ಹೇಳಿದ್ದಾರೆ.