
ಮಂಗಳೂರು, ಡಿಸೆಂಬರ್ 18: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ ಐದು ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಈ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಆದರೆ ಸೋಂಕಿತರ ಹಿನ್ನಲೆ ಮಾತ್ರ ಒಮಿಕ್ರಾನ್ ಭೀತಿ ಬೇಡ ಎನ್ನುವುದನ್ನು ಸಾರಿ ಹೇಳಿದೆ.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆಯೂ ಸ್ಪಷ್ಟಪಡಿಸಿದೆ.
ಜಿಲ್ಲೆಯ ಬಂಟ್ವಾಳ ತಾಲೂಕಿನ ನವೋದಯ ಶಾಲೆಯಲ್ಲಿ ಒಟ್ಟು 16 ಮಂದಿಯಲ್ಲಿ ನವೆಂಬರ್ ತಿಂಗಳಿನಲ್ಲಿ ಕೊರೊನಾವೈರಸ್ ಸೋಂಕು ಪತ್ತೆಯಾಗಿತ್ತು. ಸರ್ಕಾರದ ಆದೇಶದ ಹಿನ್ನಲೆಯಲ್ಲಿ ಈ ವಿದ್ಯಾರ್ಥಿಗಳ ಸ್ಬಾಬ್ ನ್ನು ಡಿಸೆಂಬರ್10ರಂದು ಜಿನೋಮಿಕ್ ಸೀಕ್ವೆನ್ಸ್ ಗೆ ಕಳುಹಿಸಲಾಗಿತ್ತು. ಎಂಟು ದಿನಗಳ ಬಳಿಕ ಡಿ.18ರಂದು ವಿದ್ಯಾರ್ಥಿ ಗಳ ಜಿನೋಮಿಕ್ ಸ್ವೀಕ್ವೆನ್ಸ್ ವರದಿ ಬಂದಿದೆ. 16 ಮಂದಿಯಲ್ಲಿ ನಾಲ್ವರಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಈಗಾಗಲೇ ವಿದ್ಯಾರ್ಥಿಗಳು ಕೊರೊನಾದಿಂದ ಸಂಪೂರ್ಣವಾಗಿ ಚೇತರಿಕೆಯಾಗಿದ್ದಾರೆ. ವಿದ್ಯಾರ್ಥಿಗಳ ತಂದೆ-ತಾಯಿ ಯಾವುದೇ ಪ್ರಯಾಣದ ಹಿನ್ನೆಲೆಯನ್ನು ಹೊಂದಿಲ್ಲ. ಅಲ್ಲದೇ ಯಾರೂ ಅಂತರಾಷ್ಟ್ರೀಯ ಪ್ರಯಾಣಿಕರು ಮತ್ತು ಕೇರಳದ ಜನರ ಸಂಪರ್ಕವನ್ನು ಹೊಂದಿಲ್ಲ. ವಿದ್ಯಾರ್ಥಿಗಳು ಆರೋಗ್ಯವಾಗಿದ್ದು, ಆರೋಗ್ಯ ಅಧಿಕಾರಿಗಳು ಭೇಟಿ ನೀಡಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕೇರಳ ಮೂಲದ ವಿದ್ಯಾರ್ಥಿಗೆ ಸೋಂಕು:
ಇನ್ನೊಂದು ಕಡೆ ಮುಕ್ಕದ ಶ್ರೀನಿವಾಸ ನರ್ಸಿಂಗ್ ಕಾಲೇಜಿನ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿಯಲ್ಲೂ ಒಮಿಕ್ರಾನ್ ಸೋಂಕು ಕಂಡು ಬಂದಿದೆ. ನರ್ಸಿಂಗ್ ಕಾಲೇಜಿನ 19 ಮಂದಿ ವಿದ್ಯಾರ್ಥಿಯಲ್ಲಿ ನವೆಂಬರ್ ನಲ್ಲಿ ಕೊರೊನಾವೈರಸ್ ಸೋಂಕು ಪತ್ತೆಯಾಗಿತ್ತು. ಸರ್ಕಾರದ ಆದೇಶದ ಪ್ರಕಾರ ಡಿಸೆಂಬರ್ 10ರಂದು ಸೋಂಕಿತರ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸ್ ಟೆಸ್ಟ್ ಗೆ ಕಳುಹಿಸಲಾಗಿತ್ತು. ಅದರಲ್ಲಿ ಓರ್ವ ವಿದ್ಯಾರ್ಥಿನಿಯಲ್ಲಿ ಒಮೈಕ್ರಾನ್ ಸೋಂಕು ಕಂಡುಬಂದಿದೆ. ವಿದ್ಯಾರ್ಥಿನಿಯನ್ನು ಆರೋಗ್ಯ ಇಲಾಖಾ ಅಧಿಕಾರಿಗಳು ಸಂಪರ್ಕ ಮಾಡಿದ್ದು, ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾಳೆ. ವಿದ್ಯಾರ್ಥಿನಿಯೂ ಆರೋಗ್ಯವಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮಾಹಿತಿ ನೀಡಿದ್ದು, ಜಿಲ್ಲೆಯಲ್ಲಿ ಕಂಡುಬಂದಿರುವ ಐದು ಒಮಿಕ್ರಾನ್ ಪ್ರಕರಣದ ಸೋಂಕಿತರು ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿಲ್ಲ. ಎಲ್ಲರೂ ಆರೋಗ್ಯವಾಗಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳು ಸಂಪರ್ಕ ಮಾಡಿದ್ದಾರೆ. ಯಾವುದೇ ಭಯಪಡುವ ಅಗತ್ಯವಿಲ್ಲ ಅಂತಾ ಹೇಳಿದ್ದಾರೆ.