ಲೋಕಸಭೆ ಚುನಾವಣೆ: ನಿಖಿಲ್ ಕುಮಾರಸ್ವಾಮಿ-ವಿಜಯೇಂದ್ರ ಸಹೋದರರಂತೆ ಒಟ್ಟಾಗಿ ಹೋಗುತ್ತಾರೆ; ಹೆಚ್​ಡಿಕೆ

Spread the love

ರಾಮನಗರ : ಬಹಳ ದಿನಗಳ ಹಿಂದೆಯೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ಮಾಡಬೇಕಿತ್ತು. ಹಲವಾರು ಕಾರ್ಯಕ್ರಮಗಳು ಇದ್ದ ಕಾರಣ ಆಗಿರಲಿಲ್ಲ. ಇವತ್ತು ರಾಜ್ಯದ ಅಭಿವೃದ್ಧಿ ದೃಷ್ಟಿಯ ಉದ್ದೇಶದಿಂದ ಭೇಟಿಯಾಗಿದ್ದೇವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ಕೇತುಗಾನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಮಾತನಾಡಿದ ಹೆಚ್​.ಡಿ ಕುಮಾರಸ್ವಾಮಿ ಅವರು, ಮುಂದೆ ಎರಡು ಪಕ್ಷಗಳು ರಾಜ್ಯದ ಅಭಿವೃದ್ಧಿಗಾಗಿ ಮತ್ತು ಜನರ ಹಿತದೃಷ್ಟಿಯಿಂದ 2024 ರ ಚುನಾವಣೆಯಲ್ಲಿ ಮತ್ತೆ ನರೇಂದ್ರ ಮೋದಿ ಅವರು ಗೆದ್ದು ಪ್ರಧಾನಿ ಆಗುವುದಕ್ಕೆ ಸಂಘಟನೆಯಲ್ಲಿ ಪಾಲ್ಗೊಳ್ಳಲು ಇಂದಿನ ಭೇಟಿಯ ಉದ್ದೇಶವಾಗಿದ್ದು, ಮೋದಿ ಮತ್ತೆ ದೇಶದ ಪ್ರಧಾನಮಂತ್ರಿ ಆಗುವ ನಿಟ್ಟಿನಲ್ಲಿ ಕೂತು ಚರ್ಚೆ ಮಾಡಿದ್ದೇವೆ. ಲೋಕಸಭಾ ಚುನಾವಣೆ ಸೀಟು ಹಂಚಿಕೆ ವಿಚಾರ ಬಗ್ಗೆ ಯಾವುದೇ ಮಾತಾಡಿಲ್ಲ. ಆ ಬಗ್ಗೆ ಕೇಂದ್ರ ನಾಯಕರು ಕುಳಿತು ಚರ್ಚೆ ಮಾಡುತ್ತಾರೆ ಎಂದರು.

ಯುವ ರಾಜ್ಯಾಧ್ಯಕ್ಷರ ನೇಮಕದಿಂದ ಕಾರ್ಯಕರ್ತರ ಹುರುಪು ಹೆಚ್ಚಾಗಿದೆ. ಅದಕ್ಕಾಗಿ ವಿಜಯೇಂದ್ರ ಅವರ ಶ್ರಮ ಹಾಕುತ್ತಿರುವುದನ್ನು ನೋಡುತ್ತಿದ್ದೇನೆ. 2006-07 ರಲ್ಲಿ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಹಾಗು ನಾನು ಸರ್ಕಾರ ನಡೆಸಿದ್ದೆವು. ಇವತ್ತು ಸಹ ಅಂತಹ ಸರ್ಕಾರ ಬರಬೇಕು ಅನ್ನೋದು ಜನರ ಅಭಿಪ್ರಾಯ ಇದೆ. ಅವತ್ತು ನಾವು ಅಭಿವೃದ್ಧಿ ಫೌಂಡೇಷನ್ ಕೊಟ್ಟಿದ್ದೆವು. ಹೀಗಾಗಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿಯೂ ವಿಜಯ ಸಾಧಿಸುತ್ತೇವೆ. ಜೆಡಿಎಸ್​ ಯುವಮುಖಂಡ ನಿಖಿಲ್ ಕುಮಾರಸ್ವಾಮಿ ಹಾಗು ವಿಜಯೇಂದ್ರ ಸಹೋದರ ಮನೋಭಾವದಲ್ಲಿ ಒಟ್ಟಾಗಿ ಹೋಗುತ್ತಾರೆ. ಇಬ್ಬರಲ್ಲೂ ಉತ್ತಮ ಬಾಂಧವ್ಯ ಜೊತೆಗೆ ಚುನಾವಣೆ ಮಾಡುತ್ತಾರೆ ಎಂದು ಹೆಚ್​ಡಿಕೆ ಹೇಳಿದರು.