ಕೋವಿಡ್-19 ಹಗರಣ : ರಾಜ್ಯ ಸರ್ಕಾರದಿಂದ ವಿಚಾರಣಾ ಆಯೋಗದ ಅವಧಿ ವಿಸ್ತರಿಸಿ ಆದೇಶ

Spread the love

ಬೆಂಗಳೂರು : ರಾಜ್ಯ ಸರ್ಕಾರವು ಕೋವಿಡ್-19 ಸಂದರ್ಭದಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕುರಿತು ತನಿಖೆ ನಡೆಸಲು ವಿಚಾರಣಾ ಆಯೋಗ ರಚನೆ ಮಾಡಿದ್ದು, ವಿಚಾರಣಾ ಆಯೋಗದ ಅವಧಿ ವಿಸ್ತರಿಸಿ ರಾಜ್ಯ ಸರ್ಕಾರ ರಾಜ್ಯಪತ್ರ ಹೊರಡಿಸಿದೆ.

  1. ಕೋವಿಡ್-19 ಸಾಂಕ್ರಾಮಿಕ ರೋಗದ ನಿವಾರಣೆ ಹಾಗೂ ತಡೆಗಟ್ಟುವಿಕೆ ಸಂಬಂಧವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಇತರೆ ಇಲಾಖೆಗಳು ಹಾಗೂ ಈ ಇಲಾಖೆಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಂಸ್ಥೆಗಳಲ್ಲಿ ಔಷಧಿ, ಉಪಕರಣಗಳು ಹಾಗೂ ಸಾಮಗ್ರಿಗಳ ಖರೀದಿ, ಆಮ್ಲಜನಕ ನಿರ್ವಹಣೆ, ಆಮ್ಲಜನಕ ಕೊರತೆಯಿಂದ ಉಂಟಾದ ಸಾವುಗಳು ಹಾಗೂ ಇತ್ಯಾದಿ ವಿಷಯಗಳ ಕುರಿತು 2021ರ ಜುಲೈ- ಆಗಸ್ಟ್ ನಲ್ಲಿ ನಡೆದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ನೀಡಿರುವ ವರದಿಯಲ್ಲಿನ ಗಂಭೀರವಾದ ಆರೋಪಗಳ ಬಗ್ಗೆ ತನಿಖೆಯನ್ನು ನಡೆಸಲು Commission of Inquiry Act 1952 ರ ನಿಯಮ 3 ಉಪನಿಯಮ 1 ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಸರ್ಕಾರವು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ಜಾನ್ ಮೈಕಲ್ ಕುನ್ಹಾ ಇವರ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು ನೇಮಿಸಿ 03 ತಿಂಗಳೊಳಗಾಗಿ ವರದಿ ಸಲ್ಲಿಸುವಂತೆ ದಿನಾಂಕ: 25.08.2023ರಂದು ಅಧಿಸೂಚನೆ ಹೊರಡಿಸಲಾಗಿರುತ್ತದೆ ಹಾಗೂ ದಿನಾಂಕ:07.10.2023ರ ಅಧಿಸೂಚನೆಯಲ್ಲಿ ಸದರಿ ವಿಚಾರಣಾ ಆಯೋಗಕ್ಕೆ (Terms of References) ಅಂಶಗಳನ್ನು ನಿಗದಿಪಡಿಸಲಾಗಿರುತ್ತದೆ.
  2. ತದನಂತರ ದಿನಾಂಕ: 22.11.2023ರ ಅಧಿಸೂಚನೆಯಲ್ಲಿ ವಿಚಾರಣಾ ಆಯೋಗದ ಅವಧಿಯನ್ನು ದಿನಾಂಕ: 24.05.2024ರವರೆಗೆ ವಿಸ್ತರಿಸಲಾಗಿತ್ತು.
  3. ಕೋವಿಡ್-19ರ ವಿಚಾರಣಾ ಆಯುಕ್ತರು, ನ್ಯಾಯಮೂರ್ತಿ ಶ್ರೀ ಜಾನ್ ಮೈಕಲ್ ಕುನ್ನ, ನಿವೃತ್ತ ನ್ಯಾಯಾಧೀಶರು, ಘನವೆತ್ತ ಉಚ್ಚ ನ್ಯಾಯಾಲಯ, ಕರ್ನಾಟಕ ಇವರ ಪತ್ರ ಸಂಖ್ಯೆ: ಆ.ಇ/ಕೋವಿಡ್-19/ವಿಚಾರಣಾ ಆಯೋಗ/70/2023-24, ದಿನಾಂಕ: 10.04.2024ರ ಮನವಿಯಲ್ಲಿ, ಸದರಿ ವಿಚಾರಣಾ ಆಯೋಗದ ಅವಧಿಯು ದಿನಾಂಕ:24.05.2024ಕ್ಕೆ ಕೊನೆಗೊಳ್ಳಲಿರುವುದರಿಂದ, ದಿನಾಂಕ:25.05.2024 ರಿಂದ 31.08.2024 ರವರೆಗೆ ವಿಚಾರಣಾ ಆಯೋಗವನ್ನು ವಿಸ್ತರಿಸಲು ಕೋರಿರುತ್ತಾರೆ.
    ಆದುದರಿಂದ, ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ಜಾನ್ ಮೈಕಲ್ ಕುನ್ಹಾ ಇವರ ನೇತೃತ್ವದ, ಕೋವಿಡ್-19ರ ವಿಚಾರಣಾ ಆಯೋಗ ಇವರ ಕೋರಿಕೆಯಂತೆ, ಆಯೋಗದ ಅವಧಿಯನ್ನು ದಿನಾಂಕ:25.05.2024 ರಿಂದ 31.08.2024 ರವರೆಗೆ ವಿಸ್ತರಿಸಲಾಗಿದೆ.