ಮಧ್ಯಮ ವರ್ಗದ ಭಾರತೀಯರ ಕನಸು ನನಸು ಮಾಡಿದ್ದ ರತನ್‌ ಟಾಟಾ– ಮೊದಲ ದೇಶೀ ಕಾರು ಮಾರುಕಟ್ಟೆಗೆ ಬಂದಿದ್ದು ಯಾವಾಗ?

Spread the love

ಮುಂಬೈ: ಇಂದು ಭಾರತದ ಅತಿದೊಡ್ಡ ಆಟೊಮೊಬೈಲ್ (Automobile) ಕಂಪನಿಯಾಗಿ ಹೆಸರು ಮಾಡಿರುವ ಟಾಟಾ ಮೋಟಾರ್ಸ್, ಟಾಟಾ ಸಮೂಹ ಸಂಸ್ಥೆಯ ಒಂದು ಅಂಗ ಸಂಸ್ಥೆ. 1945ರಲ್ಲಿ ಇದನ್ನು ಹುಟ್ಟು ಹಾಕಲಾಯಿತು. ರತನ್ ಅವರು ಟಾಟಾ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಮೇಲೆ ಅವರ ಸಲಹೆ ಮೇರೆಗೆ ಮೋಟಾರ್ಸ್ (Tata Motors) ಟಾಟಾ ಕಂಪನಿ ಭಾರತದ ಷೇರು ಮಾರುಕಟ್ಟೆಯನ್ನೂ ಪ್ರವೇಶಿಸಿತು ಎಂಬುದಂತು ಸುಳ್ಳಲ್ಲ.

1998ರ ಡಿಸೆಂಬರ್30 ರಂದು ಟಾಟಾ ಮೋಟಾರ್ಸ್‌ನ ಕನಸಿನ ಕೂಸಾದ ʻಟಾಟಾ ಇಂಡಿಕಾʼ (TaTa indica) ಕಾರನ್ನು ಅಧಿಕೃತವಾಗಿ ಬಿಡುಗಡೆಮಾಡಲಾಯಿತು. ಈ ಟಾಟಾ ಮೋಟಾರ್ಸ್‌ನ ಪ್ರಚಾರದ ಭರಾಟೆ ಎಷ್ಟಿತ್ತೆಂದರೆ, ಸಾರ್ವಜನಿಕವಾಗಿ ಅನಾವರಣವಾದ ಕೇವಲ ಒಂದೇ ವಾರದಲ್ಲಿ ಸುಮಾರು 1.15 ಲಕ್ಷ ಮಂದಿ ಬುಕ್ಕಿಂಗ್‌ ಮಾಡಿದ್ದರು. ಮುಂದಿನ ಎರಡು ವರ್ಷದಲ್ಲೇ ಭಾರತದ ನಂ.1 ಕಾರು ಎಂಬ ಪಟ್ಟ ಇಂಡಿಕಾದ್ದಾಯಿತು. ಟಾಟಾ ಸಂಸ್ಥೆ ನಿರ್ಮಿತ ಈ ಕಾರು ಭಾರತದ ಮೊದಲ ದೇಶೀ ನಿರ್ಮಿತ ಕಾರೆಂದು ಪರಿಗಣಿಸಲ್ಪಟ್ಟಿದೆ.

ಕನಸಿನ ಕಾರು ಮಾರುಕಟ್ಟೆಗೆ:
ರತನ್‌ ಅವರ ಛಲದ ಫಲವಾಗಿ 2009ರ ಮಾರ್ಚ್ 23ರಂದು ಮೊದಲ ಟಾಟಾ ನ್ಯಾನೋ (TaTa Nano Car)  ಕಾರು ಮಾರುಕಟ್ಟೆಗೆ ಪ್ರವೇಶಿಸಿತು. ಹೌದು. ಮಧ್ಯಮ ವರ್ಗದವರೇ ಹೆಚ್ಚಿರುವ ಭಾರತದಲ್ಲಿ, ಅವರಿಗೆ ಕೈಗೆಟುಕುವ ದರದಲ್ಲಿ ಕಾರು ತಯಾರಿಸುವ ಕನಸು ಕಂಡವರು ಉದ್ಯಮಿ ರತನ್ ಟಾಟಾ. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ 2003ರಲ್ಲಿ ಅವರಿಟ್ಟ ಮೊದಲ ಹೆಜ್ಜೆ ಹೆಸರೇ ‘ಟಾಟಾ ನ್ಯಾನೋ’.

ತನ್ನ ನಾವೀನ್ಯತೆ ಹಾಗೂ ಕೈಗೆಟುಕುವ ದರದಿಂದಲೇ ಅದು ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಮೊದಮೊದಲು ನ್ಯಾನೋಗೆ ನಿರೀಕ್ಷಿಸಿದಷ್ಟು ಸಫಲತೆ ದೊರಕಲಿಲ್ಲ. ಕಾರಣ, ಕಾರುಗಳನ್ನು ಅಗತ್ಯತೆ ಎಂದು ಪರಿಗಣಿಸಿದ್ದ ಟಾಟಾ ಅದನ್ನು ಅನ್ಯ ಕಾರುಗಳಂತೆ ಐಷಾರಾಮಿಯಾಗಿ ನಿರ್ಮಿಸಲಿಲ್ಲ. ನ್ಯಾನೋವನ್ನು ಕಡಿಮೆ ಬೆಲೆಯ ಕಾರೆಂದು ಬಿಂಬಿಸುವ ಮೂಲಕ ಅದರ ಖರೀದಿಯನ್ನು ಉತ್ತೇಜಿಸುವುದು ಟಾಟಾದ ತಂತ್ರವಾಗಿತ್ತಾದರೂ, ಜನ ಅಗ್ಗದ ವಸ್ತುವೆಂಬ, ಹಣೆಪಟ್ಟಿ ಹೊತ್ತ ಕಾರನ್ನು ಖರೀದಿಸಲು ಬಯಸಲಿಲ್ಲ. ಇದರಿಂದ ಮೊದಲ ಪ್ರಯತ್ನದಲ್ಲಿ ಸೋಲು ಸಹ ಆಗಿತ್ತು.

ಈ ಎಲ್ಲಾ ಕಾರಣಗಳಿಂದ ನ್ಯಾನೋ ಕಾರುಗಳ ಮಾರಾಟ ಕುಸಿತ ಕಂಡಿತು. ಆದರೂ 2018ರ ವೇಳೆಗೆ 2.75 ಲಕ್ಷ ಕಾರುಗಳು ಮಾರಾಟವಾಗಿದ್ದವು. ಈ ಮೂಲಕ ಟಾಟಾ ನ್ಯಾನೋ ಸಂಘರ್ಷದ ಹಾದಿಯ ಮೂಲಕ ಸಫಲತೆಯನ್ನು ತಲುಪಿತು. ದುರಾದೃಷ್ಟವಶಾತ್ ವರ್ಷ ಕಳೆದಂತೆ ನ್ಯಾನೋ ಕಾರುಗಳ ಮಾರಾಟ ಕುಂಠಿತವಾದ ಕಾರಣ 2020ರಲ್ಲಿ ಅದರ ಉತ್ಪಾದನೆಯನ್ನೇ ನಿಲ್ಲಿಸಲಾಯಿತು.