ಆಟೋ-ಬಸ್ ಚಾಲಕರು, ತಾಂತ್ರಿಕ ಸಿಬ್ಬಂದಿ ಮೃತಪಟ್ಟರೆ 5 ಲಕ್ಷ ಪರಿಹಾರ..!

Spread the love

ಬೆಂಗಳೂರು : ಆಟೋ ರಿಕ್ಷಾ, ಬಸ್ ಚಾಲಕರು ಹಾಗೂ ತಾಂತ್ರಿಕ ಸಿಬ್ಬಂದಿ ಮೃತಪಟ್ಟರೆ ಸರ್ಕಾರದಿಂದ ಐದು ಲಕ್ಷ ಪರಿಹಾರ ನೀಡುವ ಮಸೂದೆಯನ್ನು ಮುಂಬರುವ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕಾಲಕ್ಕೆ ನಾನೇ ಚಾಲಕನಾಗಿ ಕೆಲಸ ಮಾಡಿದ್ದೆ. ಕಾರ್ಮಿಕರ ಕಷ್ಟಗಳು ಏನೆಂಬುದು ನನಗೆ ಗೊತ್ತು. ಹೀಗಾಗಿ ಕಾರ್ಮಿಕರು ಮೃತಪಟ್ಟರೆ ಐದು ಲಕ್ಷ ಪರಿಹಾರ ಕೊಡುವ ಹೊಸ ಮಸೂದೆಯನ್ನು ಬರುವ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಹೇಳಿದರು.

ಕಾರ್ಮಿಕ ಇಲಾಖೆಯಲ್ಲಿ ನಾನು ದೃಢ ಹೆಜ್ಜೆ ಇಡಬೇಕೆಂದು ಸಂಕಲ್ಪ ಮಾಡಿದ್ದೇನೆ. ಹೀಗಾಗಿಯೆ ಈ ಮಸೂದೆಯನ್ನು ಜಾರಿ ಮಾಡಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ. ಈಗಾಗಲೇ ಇಲಾಖೆಯಲ್ಲಿ ರೂಪುರೇಷೆಗಳನ್ನು ಸಿದ್ದಪಡಿಸಲಾಗಿದೆ. ಇದರಿಂದ ಕಾರ್ಮಿಕ ವರ್ಗಕ್ಕೆ ಬಹುದೊಡ್ಡ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಮಿಕ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ನೀಡುವ ಸಹಾಯಧನವನ್ನು ದುಪ್ಪಟ್ಟು ಮಾಡಲಾಗಿದೆ. ಕಾರ್ಮಿಕರ ಹಿತವನ್ನು ಕಾಪಾಡುವುದು ನನ್ನ ಮೊದಲ ಆದ್ಯತೆ ಎಂದು ಹೆಬ್ಬಾರ್ ಹೇಳಿದರು.

ಕಾರ್ಮಿಕ ಇಲಾಖೆಗೆ ಸಂಬಂಧಪಟ್ಟಂತೆ ಇನ್ನು ಮುಂದೆ ಜಾಗೃತಿ ಜಾಥಾವನ್ನು ರಚನೆ ಮಾಡಲಾಗುವುದು. ವಲಸೆ ಕಾರ್ಮಿಕರಿಗೆ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ವಸತಿ ಸಮ್ಮುಚ್ಚಯ ಕಟ್ಟಲು ತೀರ್ಮಾನಿಸಲಾಗಿದೆ ಎಂದು ಪ್ರಕಟಿಸಿದರು. ಕಾರ್ಮಿಕ ಇಲಾಖೆಗೆ ಸಂಬಂಧಪಟ್ಟಂತೆ ನೀಡುತ್ತಿರುವ ವಿವಿಧ ಸಹಾಯ ಧನ ದುಪ್ಪಟ್ಟು ಮಾಡಲು ತೀರ್ಮಾನ ಮಾಡಲಾಗಿದೆ. ಕಾರ್ಮಿಕ ಇಲಾಖೆಯ ವಿಜಲೆನ್ಸ್ ಸೆಲ್ ಮಾಡಲಾಗುತ್ತದೆ.

ಮಿತ್ರಮಂಡಳಿಯಲ್ಲಿ ಕೆಲವರಿಗೆ ಸಚಿವ ಸ್ಥಾನ ಕೈತಪ್ಪಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದೇವೆ. ಅತಿ ಶೀಘ್ರದಲ್ಲಿ ಒಳ್ಳೆಯ ತಿರ್ಮಾನ ಕೈಗೊಳ್ಳುತ್ತಾರೆ. ನಮ್ಮ ಸ್ನೇಹಿತರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ಭರವಸೆ ಇದೆ ಎಂದರು.ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರ ನಿಮಗೇ ಗೊತ್ತಿದೆ. ಪ್ರಕರಣ ನ್ಯಾಯಾಲಯದಲ್ಲಿದೆ ಎಲ್ಲವೂ ಮುಗಿದ ಮೇಲೆ ಸಚಿವ ಸ್ಥಾನ ಸಿಗುತ್ತದೆ ಎಂದರು.

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಕುರಿತ ಮಾತನಾಡಿದ ಅವರು, ನಾಳೆಯೇ ಬದಲಾವಣೆ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಎಲ್ಲಿಯೂ ಹೇಳಿಲ್ಲ. ಮುಖ್ಯಮಂತ್ರಿಗಳ ನಿರ್ಣಯ ಕೈಗೊಳ್ಳುತ್ತಾರೆ. ಅದಕ್ಕೆ ನಾವು ಬದ್ದರಾಗಿರುತ್ತೇವೆ ಎಂದು ಹೇಳಿದರು.