ರಾಮದಾಸ್- ಯೋಗೇಶ್ವರ್ ಮಾತುಕತೆ ಬೆನ್ನಲ್ಲೇ ಬಿಎಸ್ವೈ ಭೇಟಿಯಾದ ಸಿಎಂ

Spread the love

ಬೆಂಗಳೂರು : ನಿರೀಕ್ಷಿತ ಖಾತೆ ಸಿಗದೆ ಮುನಿಸಿಕೊಂಡಿರುವ ಸಚಿವ ಆನಂದ್ ಸಿಂಗ್ ಅಸಮಾಧಾನ, ಸಂಪುಟಕ್ಕೆ ಸೇರಲು ಸಚಿವರ ಲಾಬಿ, ಶಾಸಕರ ಮುನಿಸು ನಡುವೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾದರು. ಶಾಸಕ ಎಸ್.ರಾಮದಾಸ್ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರುಗಳು ಬೆಳಗ್ಗೆ ಆರ್‍ಟಿನಗರದಲ್ಲಿರುವ ಬೊಮ್ಮಾಯಿ ಅವರ ನಿವಾಸಕ್ಕೆ ಮಾತುಕತೆ ನಡೆಸಿದ ಬೆನ್ನಲ್ಲೇ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ.

ಬೆಳಗ್ಗೆ 11.30ಕ್ಕೆ ಕಾವೇರಿಗೆ ಆಗಮಿಸಿದ ಬೊಮ್ಮಾಯಿ ಅವರು ಬಿಎಸ್‍ವೈ ಬಳಿ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಮೂಲಗಳ ಪ್ರಕಾರ ಮುಂದಿನ ವಾರ ಬಸವರಾಜ ಬೊಮ್ಮಾಯಿ ಅವರು ನವದೆಹಲಿಗೆ ತೆರಳುತ್ತಿದ್ದಾರೆ. ಸಚಿವ ಆನಂದ್ ಸಿಂಗ್ ಮುನಿಸು ಇನ್ನು ಶಮನವಾಗಿಲ್ಲ. ಖಾತೆ ಹಂಚಿಕೆಯಿಂದ ಅವರು ಅಸಮಾಧಾನಗೊಂಡಿದ್ದು, ತಮ್ಮ ನಿರ್ಧಾರವನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿದ್ದಾರೆ.

ಇದರ ನಡುವೆ ಕೆಲವು ಸಚಿವರು ಇನ್ನು ಕೂಡ ಖಾತೆ ಕ್ಯಾತೆಯನ್ನು ಮುಂದುವರೆಸಿದ್ದಾರೆ. ವಸತಿ ಖಾತೆ ಸಿಗದೆ ಅಸಮಾಧಾನಗೊಂಡಿರುವ ಸಚಿವ ಎಂಟಿಬಿ ನಾಗರಾಜ್ ನಡೆ ಕೂಡ ನಿಗೂಢವಾಗಿದೆ. ಈ ಎಲ್ಲ ಬೆಳವಣಿಗೆಗಳ ಕುರಿತಂತೆ ಬೊಮ್ಮಾಯಿ ಅವರು ಯಡಿಯೂರಪ್ಪನವರ ಬಳಿ ಬಿಕ್ಕಟ್ಟು ಶಮನದ ಬಗ್ಗೆ ಸಲಹೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ಸಂದರ್ಭದಲ್ಲಿ ಮುಂದಿನ ವಾರ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಲಿದ್ದು, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಹೀಗಾಗಿ ಇಂದು ಬೊಮ್ಮಾಯಿ ಅವರು ಯಡಿಯೂರಪ್ಪನವರ ಬಳಿ ಸುದೀರ್ಘ ಚರ್ಚೆ ನಡೆಸಿ ಮುನಿಸಿಕೊಂಡಿರುವವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕುರಿತಾಗಿ ಸಲಹೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.