ಬೆಂಗಳೂರಿನಲ್ಲಿ ಮತ್ತೊಂದು ಬಹುಮಹಡಿ ಕಟ್ಟಡ ಕುಸಿತ

Spread the love

ಬೆಂಗಳೂರು: ನಗರದಲ್ಲಿ ಮತ್ತೊಂದು ಬಹುಮಹಡಿ ಕಟ್ಟಡ ಮಂಗಳವಾರ ಬೆಳಿಗ್ಗೆ ಕುಸಿದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಡೇರಿ ವೃತ್ತದಲ್ಲಿರುವ‌ ಕೆಎಂಎಫ್ ಆವರಣದಲ್ಲಿರುವ‌ ಮೂರು ಅಂತಸ್ತಿನ ಕಟ್ಟಡ ಕುಸಿದಿದೆ. ಈ ಕಟ್ಟಡ, ನೌಕರರ ಕ್ವಾರ್ಟರ್ಸ್ ಆಗಿತ್ತು. ಶಿಥಿಲವಾಗಿದ್ದರಿಂದ ಹಲವು ತಿಂಗಳ ಹಿಂದೆಯೇ ಎಲ್ಲರನ್ನೂ ಕಟ್ಟಡದಿಂದ ಖಾಲಿ‌ ಮಾಡಿಸಲಾಗಿತ್ತು. ಕಟ್ಟಡದಲ್ಲಿ ‌ಯಾರೂ‌
ವಾಸವಿರಲಿಲ್ಲ. ಮಂಗಳವಾರ ನಿಧಾನವಾಗಿ ವಾಲಿದ ಕಟ್ಟಡ, ಕುಸಿದು ಬಿದ್ದಿದೆ.

ಸ್ಥಳಕ್ಕೆ ‌ಪೊಲೀಸರು ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಕೆಎಂಎಫ್ ಅಧಿಕಾರಿಗಳೂ ಸ್ಥಳದಲ್ಲಿದ್ದಾರೆ. ಕಟ್ಟಡದ ಅವಶೇಷಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಲಕ್ಕಸಂದ್ರದಲ್ಲಿ ಸೋಮವಾರವಷ್ಟೇ ಮೂರು ಅಂತಸ್ತಿನ ಕಟ್ಟಡ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ.