ರೈತರ ಬೇಡಿಕೆಗಳು ನ್ಯಾಯಸಮ್ಮತ, ಕೇಂದ್ರವು ಅವುಗಳನ್ನು ಪರಿಗಣಿಸಬೇಕು: ಕೇಜ್ರಿವಾಲ್

Spread the love

ನವದೆಹಲಿ: ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆಗಳನ್ನು ಪರಿಗಣಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಹಾಗೆ ಮಾಡಿದರೆ ಅದು ಯಾರ ಮುಂದೆಯೂ ತಲೆಬಾಗಿದಂತೆ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.

‘ನಾವು ಭಗತ್ ಸಿಂಗ್ ಜನ್ಮದಿನವನ್ನು ಆಚರಿಸುತ್ತಿದ್ದೇವೆ. ಅವರು ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಸರ್ವೋಚ್ಚ ತ್ಯಾಗ ಮಾಡಿದರು. ರೈತರು ತಮ್ಮ ಬೇಡಿಕೆಗಳನ್ನು ಪರಿಗಣಿಸಲು ಬೀದಿಗಿಳಿದು ಒಂದು ವರ್ಷ ಪ್ರತಿಭಟನೆ ನಡೆಸಬೇಕಾದ ದಿನಕ್ಕಾಗಿ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಲಿಲ್ಲ’ ಎಂದು ದೆಹಲಿ ಪ್ರವಾಸೋದ್ಯಮ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿ ಕೇಜ್ರಿವಾಲ್ ಮಾತನಾಡಿದರು.

ಮೂರೂ ವಿವಾದಾತ್ಮಕ ಕಾನೂನುಗಳು ಜಾರಿಗೆ ಬಂದು ಒಂದು ವರ್ಷ ಕಳೆದಿದೆ. ಕಾಯ್ದೆಗಳನ್ನು ವಿರೋಧಿಸಿ ಸಾವಿರಾರು ರೈತರು ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಖ್ಯವಾಗಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ನವೆಂಬರ್ 2020ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

‘ಕೇಂದ್ರ ಸರ್ಕಾರವು ಅವರ ಬೇಡಿಕೆಗಳನ್ನು ಪರಿಗಣಿಸಬೇಕು. ರೈತರೂ ನಮ್ಮ ದೇಶದ ಜನರಾಗಿರುವುದರಿಂದ ಅವರ ಬೇಡಿಕೆ ಈಡೇರಿಸಿದರೆ ಯಾರ ಮುಂದೆಯೂ ತಲೆಬಾಗಿದಂತೆ ಆಗುವುದಿಲ್ಲ’ ಎಂದು ಕೇಜ್ರಿವಾಲ್ ಹೇಳಿದರು.

ರೈತರು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪದೇ ಪದೇ ಭಾರತ್ ಬಂದ್‌ಗೆ ಕರೆ ನೀಡುತ್ತಿದ್ದಾರೆ. ಅವರ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದು, ಕೇಂದ್ರವು ಅವುಗಳನ್ನು ಪರಿಗಣಿಸಬೇಕು ಎಂದು ಅವರು ಹೇಳಿದರು.

ತಮ್ಮ ಬೇಡಿಕೆಗಳನ್ನು ಪೂರೈಸಬೇಕೆಂದು ರೈತರು ಭಗತ್ ಸಿಂಗ್ ಜನ್ಮದಿನದಂದು ಭಾರತ್ ಬಂದ್‌ಗೆ ಕರೆ ನೀಡಿರುವುದು ದುಃಖಕರ ಎಂದು ಹೇಳಿದ್ದಾರೆ.

‘ಸ್ವತಂತ್ರ ಭಾರತದಲ್ಲಿ ರೈತರ ಮಾತನ್ನು ಕೇಳದಿದ್ದರೆ, ಅವರು ಎಲ್ಲಿ ಹೋಗಬೇಕು? ಅವರ ಬೇಡಿಕೆಗಳನ್ನು ಆದಷ್ಟು ಬೇಗ ಪರಿಗಣಿಸುವಂತೆ ನಾನು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ’ಎಂದು ಅವರು ದೆಹಲಿ ವಿಧಾನಸಭೆಯಲ್ಲಿ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಆಮ್ ಆದ್ಮಿ ಪಕ್ಷ ಸಹ ಭಾರತ್ ಬಂದ್‌ಗೆ ಬೆಂಬಲ ಸೂಚಿಸಿದೆ.